ಶ್ರೀಮಂಗಲ, ನ. 26: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಒಟ್ಟು ರೂ. 14.29 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆ ಹಾಗೂ ಸೇತುವೆ ಕಾಮಗಾರಿ ಶೀಘ್ರದಲ್ಲಿ ಪುನರ್ ಆರಂಭಿಸಲು ಬೆಂಗಳೂರಿನಲ್ಲಿ ಇತ್ತೀಚೆಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ. ಕಾಮಗಾರಿಗೆ ಉಂಟಾಗಿರುವ ತಾಂತ್ರಿಕ ಸಮಸ್ಯೆ ನಿವಾರಿಸಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿದ್ದಾಟಂಡ ಟಿ. ಪ್ರದೀಪ್ ಅವರು ತಿಳಿಸಿದ್ದಾರೆ. ಬಿರುನಾಣಿ ಬೆಳೆಗಾರರ ಒಕ್ಕೂಟ ಹಾಗೂ ಕೊಡವ ಸಮಾಜಗಳು ರಸ್ತೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸದಿದ್ದರೆ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡಿರುವ ವರದಿಗೆ ಪ್ರತಿಕ್ರಿಯಿಸಿರುವ ಪ್ರದೀಪ್ ಅವರು, ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಇಂಜಿನಿಯರ್‍ಗಳು ಗುತ್ತಿಗೆದಾರರ ಸಭೆ ನಡೆದಿದೆ.

ತಾಂತ್ರಿಕ ಸಮಸ್ಯೆ ನಿವಾರಿಸಿ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ರಾಜೇಂದ್ರ ಅವರೇ ಈ ಕಾಮಗಾರಿಯನ್ನು ನಡೆಸುತ್ತಾರೆ. ಬಿರುನಾಣಿ, ಹುದಿಕೇರಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಈ ವ್ಯಾಪ್ತಿಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಜನತೆಗೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ 2012-13ರಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಸಂಸದರಾಗಿದ್ದ ಅಡಗೂರು ವಿಶ್ವನಾಥ್ ಅವರ ಅವಧಿಯಲ್ಲಿ ಸೇತುವೆಗಾಗಿ ರೂ. 2.18 ಕೋಟಿ, ಹುದಿಕೇರಿ, ಹೈಸೊಡ್ಲೂರು, ಬಾಡಗರಕೇರಿ ರಸ್ತೆಗಾಗಿ ರೂ. 6.42 ಕೋಟಿ, (8.42 ಕಿ.ಮೀ)

(ಮೊದಲ ಪುಟದಿಂದ) ಬಿರುನಾಣಿ ಪಡತಲೆ ರಸ್ತೆಗಾಗಿ 5.69 ಕೋಟಿ, (6.52 ಕಿ.ಮೀ) ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಆದ್ದರಿಂದ ಈ ಭಾಗದ ಜನರು ಪ್ರತಿಭಟನೆ ಕೈಗೊಳ್ಳುವದನ್ನು ಕೈಬಿಡುವಂತೆ ಕೋರಿದ್ದಾರೆ.

ತಪ್ಪು ಗ್ರಹಿಕೆ : ಮಡಿಕೇರಿ ಸರ್ವೇ ಇಲಾಖೆಯ ಎ.ಡಿ.ಎಲ್.ಆರ್. ಷÀಂಶುದ್ದೀನ್ ಅವರು ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಅವರ ಬಗ್ಗೆ ಕೆಲವು ಸಂಘಟನೆಗಳು ತಪ್ಪು ಗ್ರಹಿಕೆಯಿಂದ ಆರೋಪ ಮಾಡುತ್ತಿವೆ. ಈ ಬಗ್ಗೆ ಸಂಘಟನೆಗಳಿಗೆ ಮನವರಿಕೆ ಮಾಡಲಾಗುವದು. ಇಂತಹ ಪ್ರಾಮಾಣಿಕ ಅಧಿಕಾರಿಗಳು ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಜನರ ಕೆಲಸಗಳು ಆಗುತ್ತಿದೆ. ಭ್ರಷ್ಟ್ಟಾಚಾರ ರಹಿತವಾದ ಸರ್ವೇ ಅಧಿಕಾರಿ ಸಂಶುದ್ದೀನ್ ಅವರು ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಅವರು ಬಂದ ನಂತರ ಬಹಳಷ್ಟು ಬಾಕಿ ಉಳಿದಿದ್ದ ಕೆಲಸಗಳು ಆಗುತ್ತಿದೆ. ಆದ್ದರಿಂದ ಅಧಿಕಾರಿಯ ಬಗ್ಗೆ ತಪ್ಪು ಗ್ರಹಿಕೆಯಿಂದ ಆರೋಪ ಮಾಡಿದವರಿಗೆ ಮನವರಿಕೆ ಮಾಡಿ, ಪ್ರಾಮಾಣಿಕ ಅಧಿಕಾರಿಯಾದ ಸಂಶುದ್ದೀನ್ ಅವರನ್ನು ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವದು ಎಂದು ಹೇಳಿದರು.