ಗೋಣಿಕೊಪ್ಪಲು, ಜ.19: ಇತ್ತೀಚೆಗಿನ ಎಪಿಎಂಸಿ ಚುನಾವಣೆಯ ಹೀನಾಯ ಸೋಲಿನ ನಂತರವೂ ಕಾಂಗ್ರೆಸ್ಸಿಗರು ಪಾಠ ಕಲಿಯದೆ ಇದೀಗ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಅವರ ಅಕಾಲಿಕ ಸಾವಿನಲ್ಲೂ ಕೆ.ಬಾಡಗ ಕಾಂಗ್ರೆಸ್ಸಿಗರು ವಿಕೃತ ವರ್ತನೆ ತೋರಿದ್ದಾರೆ ಎಂದು ಅಲ್ಲಿನ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೆಮ್ಮಣಮಾಡ ನವೀನ್‍ನಾಚಪ್ಪ ಆರೋಪಿಸಿದ್ದಾರೆ.

ಬಿ.ಟಿ.ಪ್ರದೀಪ್ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದು ಪಕ್ಷಾತೀತವಾಗಿ ಎಲ್ಲರಿಗೂ ಪ್ರಿಯವಾದ ವ್ಯಕ್ತಿಯಾಗಿದ್ದರು. ತಾ.16 ರಂದು ಕೆ.ಬಾಡಗ-ಹಾಲಂದೋಡು ಗಿರಿಜನ ಕಾಲೋನಿ ಕಾಂಕ್ರಿಟ್ ರಸ್ತೆ ಉದ್ಘಾಟನೆಗೂ ಮುನ್ನ ಕಾಂಗ್ರೆಸ್ ಮುಖಂಡ ಬಿ.ಟಿ.ಪ್ರದೀಪ್ ನಿಧನಕ್ಕೆ ಬಿಜೆಪಿ ಪ್ರಮುಖರು ಹಾಗೂ ಗ್ರಾಮಸ್ಥರು ಮೊದಲಿಗೆ ಸಂತಾಪ ವ್ಯಕ್ತಪಡಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಶಾಸಕ ಕೆ.ಜಿ.ಬೋಪಯ್ಯ ಅವರು ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಪ್ರದೀಪ್ ಅವರ ಮನೆಗೂ ಧಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದರೆ, ರಸ್ತೆ ಕಾಮಗಾರಿ ಉದ್ಘಾಟನೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರದೀಪ್ ಅವರ ಸಾವನ್ನು ಎಳೆದು ತಂದಿರುವ ಕಾಂಗ್ರೆಸ್ಸಿನ ಪ್ರಮುಖರ ಮನಸ್ಥಿತಿ ಅಕ್ಷಮ್ಯ ಎಂದು ಬಿಜೆಪಿ ಪ್ರಮುಖರು ದೂರಿದ್ದಾರೆ.

ಕೆ.ಬಾಡಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಶಾಸಕ ಬೋಪಯ್ಯ ಅವರನ್ನು ತೆಗಳುವ ಆತುರದಲ್ಲಿ ಕಾಂಗ್ರೆಸ್ಸಿನ ಮುತ್ಸದ್ದಿ ರಾಜಕಾರಣಿ ಪ್ರದೀಪ್‍ಗೆ ದ್ರೋಹ ಬಗೆಯಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೆ. ಬಾಡಗದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಕುಟ್ಟ ತಾ.ಪಂ.ಸದಸ್ಯ ಪಲ್ವಿನ್ ಪೂಣಚ್ಚ, ಗ್ರಾ.ಪಂ.ಅಧ್ಯಕ್ಷೆ ಕೆ.ಎಂ.ಉಷಾ, ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ ಹಾಗೂ ಕುಟ್ಟದ ರಾಮಕೃಷ್ಣ ಅವರು, ಪ್ರದೀಪ್ ನಿಧನದ ದಿನವೇ ಶಾಸಕ ಬೋಪಯ್ಯ ಅವರು ಕಾಂಕ್ರಿಟ್ ರಸ್ತೆ ಉದ್ಘಾಟನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಪ್ರದೀಪ್ ನಿಧನವಾಗಿರುವದು ತಾ.15 ರಂದು ಸಂಜೆ. ಶಾಸಕ ಬೋಪಯ್ಯ ಅವರು ಉದ್ದೇಶಿತ ರಸ್ತೆ ಉದ್ಘಾಟನೆ ಮಾಡುವ ದಿನಾಂಕ 15 ದಿನ ಮುಂಚಿತ ವಾಗಿಯೇ ನಿರ್ಧಾರವಾಗಿತ್ತು. ಆದರೆ, ಇದನ್ನರಿತ ಗ್ರಾ.ಪಂ.ಅಧ್ಯಕ್ಷೆ ಉಷಾ ಮತ್ತು ಕೆಲವರು ತಾ.13 ರಂದೇ ಉದ್ಘಾಟನೆ ಮಾಡುವ ನಾಟಕ ವಾಡಿದ್ದಾರೆ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಹಾಗೂ ಕೆ.ಬಾಡಗ ಗ್ರಾ.ಪಂ.ನ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರಾದ ಸೀತಮ್ಮ, ನವೀನ್‍ನಾಣಯ್ಯ, ಡೀನಾ ಹಾಗೂ ಕಟ್ಟೇರ ವಿಜಯಕುಮಾರಿ ಅವರಿಗೆ ಶಿಷ್ಟಾಚಾರಕ್ಕೂ ಆಹ್ವಾನ ನೀಡದೆ ತಾರತಮ್ಯ ಮಾಡಲಾಗಿದೆ. ಐಟಿಡಿಪಿ ಇಲಾಖೆ ಒಳಗೊಂಡಂತೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯಾವದೇ ಕಾಮಗಾರಿ ಮಾಹಿತಿ ಶಾಸಕರ ಗಮನಕ್ಕೆ ಬರಲೇಬೇಕಾಗುತ್ತದೆ. ಶಾಸಕರ ತ್ರೈಮಾಸಿಕ ಸಭೆಯಲ್ಲಿಯೂ ಉದ್ಧೇಶಿತ ಕಾಮಗಾರಿ ವಿಚಾರ ಪ್ರಸ್ತಾಪವಾಗಿದೆ. ಇಷ್ಟಕ್ಕೂ ಸಮಗ್ರ ಗಿರಿಜನ ಉಪಯೋಜನೆಯ (ಐಟಿಡಿಪಿ) ಸಂಪೂರ್ಣ ಅನುದಾನ ಕೇಂದ್ರದಿಂದ ಬಂದಿದೆಯೇ ಹೊರತು ರಾಜ್ಯ ಸರ್ಕಾರದಿಂದ ಐಟಿಡಿಪಿ ಇಲಾಖೆಗೆ ಯಾವದೇ ಅನುದಾನ ಬಿಡುಗಡೆಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೆ.ಬಾಡಗ- ಹಾಲಂದೋಡು ಗಿರಿಜನ ಕಾಲೋನಿ ರಸ್ತೆಗೆ ಶಾಸಕ ಬೋಪಯ್ಯ ಅವರು ಮೂರು ವರ್ಷ ಮೊದಲೇ ರೂ.5 ಲಕ್ಷ ತಮ್ಮ ಅನುದಾನ ಬಿಡುಗಡೆಗೊಳಿಸಿದ್ದರು. ನಂತರ ರೂ.10 ಲಕ್ಷ ಅನುದಾನ ಬಿಡುಗಡೆ ಮಾಡಲು ಶ್ರಮಿಸಿದ್ದರು. ಇದೀಗ ಐಟಿಡಿಪಿ ಇಲಾಖೆ ಮೂಲಕ ಉದ್ಧೇಶಿತ ಕಾಂಕ್ರಿಟ್ ರಸ್ತೆಗೆ ರೂ.35 ಲಕ್ಷ ಅನುದಾನವೂ ಬೋಪಯ್ಯ ಅವರ ಪ್ರಯತ್ನದಿಂದಲೇ ಬಿಡುಗಡೆಯಾಗಿತ್ತು. ಕೆ.ಬಾಡಗ ಗ್ರಾಮಕ್ಕೆ ಮಾಜಿ ಉಸ್ತುವಾರಿ ಸಚಿವ ದಿನೇಶ್‍ಗುಂಡೂರಾವ್ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಆದರೆ, ಶಾಸಕ ಬೋಪಯ್ಯ ಅವರು ಇಲ್ಲಿನ ಗ್ರಾಮಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಿದ್ದೂ ಸೇಡಿನ ರಾಜಕಾರಣದಿಂದ ಪ್ರದೀಪ್ ನಿಧನದ ದಿನವೇ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು ಎಂಬ ಗಂಭೀರ ಆರೋಪದ ಮೂಲಕ ವಾಸ್ತವಾಂಶವನ್ನು ತಿರುಚುವ ಯತ್ನ ಸಾಗಿದೆ ಎಂದು ಬಿಜೆಪಿ ಪ್ರಮುಖರು ಆರೋಪಿಸಿದ್ದಾರೆ.

ಕೆ.ಬಾಡಗ ನೂತನ ಕಾಂಕ್ರಿಟ್ ರಸ್ತೆಯಲ್ಲಿಯೇ ಪತ್ರಿಕಾ ಹೇಳಿಕೆಯನ್ನು ನೂತನ ಶ್ರೀಮಂಗಲ ಎಪಿಎಂಸಿ ಸದಸ್ಯ ಕಳ್ಳಂಗಡ ಪಿ.ಬಾಲಕೃಷ್ಣ, ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಪೆಮ್ಮಣಮಾಡ ರಮೇಶ್, ಕಿರು ನೀರಾವರಿ ಯೋಜನೆಗೆ ಸ್ಥಳ ದಾನಿಯಾದ ಕಾಮೇಯಂಡ ಜಾಯ್ ಅಯ್ಯಪ್ಪ, ಕಳ್ಳಂಗಡ ಸೌರಭ್‍ಗಣಪತಿ, ಕಳ್ಳಿಚಂಡ ರತ್ನ ಪೂವಯ್ಯ, ಅಳಮೇಂಗಡ ಮೋಟಯ್ಯ, ಕಳ್ಳಂಗಡ ಅಪ್ಪಣ್ಣ, ಚೆಟ್ಟಮಾಡ ಅನಿಲ್ ಉತ್ತಪ್ಪ, ಗ್ರಾಮಸ್ಥರಾದ ಅಶ್ವಥ್ ನೀಡಿದ್ದು, ಶಾಸಕರ ವಿರುದ್ಧ ಆರೋಪವನ್ನು ಖಂಡಿಸಿದ್ದಾರೆ.

-ಟಿ.ಎಲ್.ಎಸ್.