ಗೋಣಿಕೊಪ್ಪಲು, ಡಿ.15: ಬಿಜೆಪಿ ಬರ ಅಧ್ಯಯನ ಸಮಿತಿಯು ಬರ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದು, ವೀರಾಜಪೇಟೆ ತಾಲೂಕಿನ ಬಾಡಗ ಗ್ರಾಮದಲ್ಲಿ ನೀರಿಲ್ಲದೆ ಬತ್ತಿ ಹೋಗಿರುವ ಕೆರೆಯನ್ನು ವೀಕ್ಷಿಸಲಾಯಿತು. ಬಳಿಕ ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರ 139 ಗ್ರಾಮಗಳನ್ನು ಬರಪೀಡಿತ ಗ್ರಾಮ ಎಂದು ಘೊಷಣೆ ಮಾಡಿದ್ದು, ಯಾವದೇ ಪ್ರದೇಶಕ್ಕೆ ಕೃಷಿ ಸಚಿವರಾಗಲೀ ರಾಜ್ಯದ ಅಧ್ಯಯನ ತಂಡವಾಗಲಿ ತೆರಳಿ ಪರಿಸ್ಥಿತಿಯನ್ನು ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ರಾಜ್ಯ ಬಿಜೆಪಿ ವತಿಯಿಂದ ಬರ ಅಧ್ಯಯನಕ್ಕಾಗಿ ಹತ್ತು ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬರಪೀಡಿತ ಪ್ರದೇಶಗಳ ಸಮಗ್ರ ವರದಿಯನ್ನು ಕೇಂದ್ರ ಹಾಗೂ ರಾಜ್ಯಕ್ಕೆ ಕಳುಹಿಸಿ ಕೊಡುವದಾಗಿ ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರ ಎದುರಾಗಿದ್ದರೂ ಯಾವದೇ ಪರಿಹಾರ ಕಾರ್ಯಕೈಗೊಳ್ಳದೆ ಸಿದ್ದರಾಮಯ್ಯ ಸರ್ಕಾರ ನಿದ್ದೆ ಮಾಡುತ್ತಿದ್ದು, ಅವರ ಸಚಿವ ಸಂಪುಟ ಕೂಡಾ ನಿದ್ದೆಗೆ ಜಾರಿದೆ. ರೈತರನ್ನು ಅತ್ಯಂತ ಕೀಳಾಗಿ ನೋಡಿಕೊಳ್ಳುತ್ತಿದ್ದಾರೆಂದು ಆರೋಪಿ ಸಿದರು. ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಗಿ 2270 ಕೋಟಿ ರೂ.ಗಳು ಅನುದಾನ ರಾಜ್ಯಕ್ಕೆ ನೀಡಿದ್ದರೂ ಅದನ್ನು ಸಮರ್ಪಕ ಬಳಕೆ ಮಾಡದೆ ಹಣ ವಾಪಸ್ ಹೋಗಿರುವದಾಗಿ ತಿಳಿಸಿದರು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ರೈತರು ಆತಹÀತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ರೈತರು ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಕೈ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಕೂಡಲೇ ರೈತರ ಪರ ಕಾರ್ಯಕ್ರಮ ಹಮ್ಮಿಕೊಂಡು ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ವೀರಾಜಪೇಟೆ ತಾಲೂಕಿನಲ್ಲಿ ಭತ್ತದ ಕೃಷಿಯನ್ನೇ ಅವಲಂಭಿಸಿಕೊಂಡಿದ್ದ ರೈತರು ನೀರಿನ ಸಮಸ್ಯೆಯಿಂದಾಗಿ ಶೇ. 80ರಷ್ಟು ಭತ್ತದ ಕೃಷಿಯನ್ನು ಕೈ ಬಿಟ್ಟಿದ್ದಾರೆ. ಇನ್ನು ದನ -ಕರುಗಳಿಗೆ ಮೇವಿಲ್ಲದೆ ಸಾವನ್ನಪ್ಪುತ್ತಿವೆ. ಕೇಂದ್ರದ ಫಸಲು ಭೀಮಾ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಕೂಡಾ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ರೈತರು ಕಂಗಾಲಾಗಲು ಕಾರಣ ಎಂದು ಆರೋಪಿಸಿದರು. ಮಳೆ ಬೆಳೆಯಿಲ್ಲದೆ ರೈತರು ಮತ್ತು ಜಾನುವಾರುಗಳು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಕಚೇರಿಯಲ್ಲಿ ಕುಳಿತು ವರದಿ ತಯಾರು ಮಾಡುವ ನಾಟಕವಾಡುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ರೈತರಲ್ಲಿಗೆ ತೆರಳಿ ನೈಜ ವರದಿ ತಯಾರಿಸಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕೆಂದರು. ಇಲ್ಲದಿದ್ದಲ್ಲಿ ರಾಜ್ಯ ವ್ಯಾಪಿ ರೈತ ಚಳುವಳಿಯನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು.

ರಾಜ್ಯ ಬಿಜೆಪಿ ಬರ ಅಧ್ಯಯನ ತಂಡ ಇಂದು ಪ್ರಮುಖವಾಗಿ ಮಾಲ್ದಾರೆ, ಬಾಡಗ ಬಾಣಂಗಾಲ, ತಿತಿಮತಿ ಜಂಗಲ್ ಹಾಡಿ, ಚೊಟ್ಟೆಪಾರೆ ಹಾಡಿಗೆ ಭೇಟಿ ನೀಡಿತು.

ಇದೇ ಸಂದರ್ಭ ದಿಡ್ದಳ್ಳಿಯ ನಿರಾಶ್ರಿತ ಆದಿವಾಸಿಗಳ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಅಲ್ಲಿನ ಆಶ್ರಮ ಶಾಲೆಯಲ್ಲಿ ದಾಸ್ತಾನು ಇರಿಸಿದ್ದ ಪೌಷ್ಟಿಕ ಆಹಾರವನ್ನು ತೆಗೆದು ನಿರಾಶ್ರಿತರಿಗೆ ನೀಡಲಾಯಿತು.

ಈ ಸಂದರ್ಭ ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣು ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ಜಿಲ್ಲಾ ಕೃಷಿ ಮೋರ್ಚಾ ಅಧ್ಯಕ್ಷ ತಾಕೇರಿ ಪೊನ್ನಪ್ಪ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾ.ಪಂ ಉಪಾಧ್ಯಕ್ಷ ರಾಜ ಮತ್ತು ಇತರರು ಇದ್ದರು.