ಮಡಿಕೇರಿ, ಜು. 7: ಬಿಜೆಪಿ ಪಕ್ಷದ ನಡವಳಿಕೆ ಎಲ್ಲರಿಗೂ ಅರಿವಾಗಿದೆ. ಚುನಾವಣೆ ಎಂದ ಕೂಡಲೇ ಎಂತಹ ಕೀಳೂ ಮಟ್ಟಕ್ಕಾದರೂ ಇಳಿದು ಚುನಾವಣೆ ಗೆಲ್ಲಲು ಬಿಜೆಪಿ ಕುತಂತ್ರ ರೂಪಿಸುತ್ತದೆ. ಅದರಲ್ಲಿ ಚುನಾವಣೆ ಸಂದರ್ಭ ಮತೀಯ ಗಲಭೆ ಎಬ್ಬಿಸುವದು, ಜನರ ಭಾವನೆಗಳ ಜೊತೆ ಆಟ ಆಡುವದು ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸೋದು ಬಿಜೆಪಿ ಕಾರ್ಯವಾಗಿದೆ ಎಂದು ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಆರೋಪಿಸಿದ್ದಾರೆ. ಕಳೆದ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಕೂಡಾ ನಕಲಿ ಜಾತಿ ಪ್ರಮಾಣ ಪತ್ರದೊಂದಿಗೆ ರಾಜಾ ರಾವ್ ಪ್ರತಿನಿದಿಸಿದ್ದು ಅದೀಗ ಜಗಜ್ಜಾಹೀರವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೂಡಿಗೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಕೆ.ಆರ್. ಮಂಜುಳಾ ಅವರು ಪರಿವಾರ ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿ ಎಂಬ ನಕಲಿ ದೃಢೀಕರಣ ಸೃಷ್ಟಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆರಾಗಿ ಆಯ್ಕೆಯಾಗಿದ್ದಾರೆ.

ಬಿ.ಜೆ.ಪಿ.ಯವರಿಗೆ ಕೊಡಗಿನಲ್ಲಿ ನೈಜ ಗಿರಿಜನ ಅಭ್ಯರ್ಥಿಗಳು ಸಿಗುದಿಲ್ಲವೇ ..? ಎಷ್ಟೋ ವಿದ್ಯಾವಂತ ಗಿರಿಜನರು ಸಂಘಟನೆಯಲ್ಲಿ ತೊಡಗಿಸಿಕೊಂಡವರು ಇದ್ದಾರೆ ಅಂಥ ಜನರಿಗೆ ಅವಕಾಶ ಕೊಡದೆ ಜನರನ್ನು, ಸರಕಾರವನ್ನು ಮೋಸ ಮಾಡಿ ಗಿರಿಜನರ ಅವಕಾಶವನ್ನು ದುರ್ಬಳಕೆ ಮಾಡಿ ಕೊಳ್ಳುವದು ನಾಚಿಕೆ ಗೇಡಿತನದ ಸಂಗತಿ ಎಂದು ಹೇಳಿದ್ದಾರೆ. ಸರಕಾರದ ಗಿರಿಜನರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶವನ್ನು ಮುಚ್ಚಿಟ್ಟು ಅವರನ್ನು ಕತ್ತಲೆಯಲ್ಲಿ ಇಡುವದು ಎಷ್ಟರ ಮಟ್ಟಿಗೆ ಸರಿ.. ಚುನಾವಣೆ ಸಂದರ್ಭದಲ್ಲಿ ಗಿರಿಜನರನ್ನು ಬಳಸಿಕೊಳ್ಳುವ ಬಿ .ಜೆ .ಪಿ ಯ ಮನಸ್ಥಿತಿ ಎಂಥದು ಎನ್ನುವದನ್ನು ಜನತೆ ತಿಳಿಯಬೇಕಿದೆ. ಬೇರೆ ಬೇರೆ ವಿಚಾರಗಳಿಗೆ ಹೋರಾಟ ಮಾಡುವ ಬಿಜೆಪಿಗೆ ತಮ್ಮದೇ ಪಕ್ಷದ ಅಭ್ಯರ್ಥಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ವಿಚಾರ ಗೊತ್ತಿರಲಿಲ್ಲವೇ ಅಥವಾ ಗೊತ್ತಿದ್ದೂ ಪಕ್ಷ ಇದಕ್ಕೆ ಸಾಥ್ ನೀಡಿ ಸುಮ್ಮನಾಯಿತೇ ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ಬಿಜೆಪಿಯ ಇಂತಹ ಕುತಂತ್ರ ಎದುರಿಸಲು ಸಿದ್ಧವಿದೆ ಎಂದಿದ್ದಾರೆ. ನ್ಯಾಯಾಲಯ ಮಂಜುಳಾ ಅವರ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ತೀರ್ಪು ನೀಡಿರುವದರಿಂದ ಕೂಡಿಗೆಯ ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇನ್ನಾದರೂ ಬಿಜೆಪಿ ಇಂತಹ ಕುತಂತ್ರ ಮಾಡುವದನ್ನು ನಿಲ್ಲಿಸಿ ನೈಜ ಗಿರಿಜನರಿಗೆ ಅವಕಾಶ ಮಾಡಿ ಕೊಡಲಿ ಎಂದು ಆಗ್ರಹಿಸಿದ್ದಾರೆ.