ಮಡಿಕೇರಿ, ಡಿ.8 : ಜಿಲ್ಲೆಯಲ್ಲಿ ಬಿಜೆಪಿ ಅಭಿವೃದ್ಧಿ ಪರ ಚಿಂತನೆಗಳಿಗೆ ಆದ್ಯತೆ ನೀಡದೆ ಕೇವಲ ಸಮಾಜದಲ್ಲಿ ಒಡಕು ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಜಾತ್ಯಾತೀತ ಜನತಾದಳದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿ.ಎಲ್.ವಿಶ್ವ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳ ನಡುವೆ ಹೊಂದಾಣಿಕೆಯ ಕೊರತೆ ಎದುರಾಗಿದ್ದು, ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಗೆ ಸಚಿವರು ಆಗಮಿಸುವದು ಸ್ವಲ್ಪ ತಡವಾಯಿತು ಎನ್ನುವ ಕಾರಣವನ್ನು ನೆಪ ಮಾಡಿಕೊಂಡು ಶಾಸಕರುಗಳು ಸಭಾತ್ಯಾಗ ಮಾಡಿರುವದು ಸರಿಯಾದ ಕ್ರಮವಲ್ಲ. ಸ್ಪೀಕರ್ ಸ್ಥಾನದಲ್ಲಿ ಅನುಭವ ಗಳಿಸಿರುವ ಹಿರಿಯ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಇಂಥ ವರ್ತನೆಗಳು ಶೋಭೆ ತರುವದಿಲ್ಲ ವೆಂದು ಎಂದರು. ಐಗೂರು ಗ್ರಾಮದ ಮಸೀದಿಯಲ್ಲಿ ಪವಿತ್ರ ಕುರ್‍ಅನ್ ನ್ನು ಸುಟ್ಟು ಹಾಕಿದ ಪ್ರಕರಣ ನಡೆದು ಒಂದು ತಿಂಗಳಾಗಿದ್ದರೂ ಆರೋಪಿ ಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ. ಐಗೂರಿನಲ್ಲಿ ನಡೆದಿರುವ ಎರಡೂ ಪ್ರಕರಣಗಳು ಅತ್ಯಂತ ಖಂಡನೀಯವಾಗಿದೆ.

ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ ಕುರಾನ್ ಸುಟ್ಟ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಐಜಿ ಬಿ.ಕೆ.ಸಿಂಗ್ ಅವರು ಐಗೂರಿಗೆ ಭೇಟಿ ನೀಡಿಲ್ಲವೆಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಪ್ರವಾದಿ ಅವರ ಜನ್ಮದಿನದಂದು ಮುಸಲ್ಮಾನರು ಮೆರವಣಿಗೆ ನಡೆಸಲು ಕೂಡ ಅವಕಾಶ ನೀಡುತ್ತಿಲ್ಲ. ಬಿಜೆಪಿ ಸರಕಾರವಿದ್ದಾಗ ಅನುಮತಿ ಸಿಗುತ್ತಿತ್ತು ಎಂದು ಅವರು ನೆನಪಿಸಿಕೊಂಡರು.

ವೀರಾಜಪೇಟೆ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಮಾತನಾಡಿ ನೈಜ ಜಾತ್ಯಾತೀತ ನಿಲುವನ್ನು ಹೊಂದಿರುವ ಜೆಡಿಎಸ್ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತಿಲ್ಲವೆಂದು ಟೀಕಿಸಿದರು.

ಐಗೂರು ಗ್ರಾ.ಪಂ ಸದಸ್ಯ ಡಿ.ಎಸ್.ಚಂಗಪ್ಪ ಮಾತನಾಡಿ ಗ್ರಾಮದಲ್ಲಿ ಹಿಂದೂ ಹಾಗೂ ಮುಸಲ್ಮಾನರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದರೂ ಕೆಲವು ಕೋಮುವಾದಿಗಳು ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯತ್ ಸದಸ್ಯ ಎಸ್.ಹೆಚ್.ಮತೀನ್ ಹಾಗೂ ಪಕ್ಷದ ಕುಟ್ಟ ವಿಭಾಗದ ಮುಖಂಡ ಮಂದಣ್ಣ ಉಪಸ್ಥಿತರಿದ್ದರು.