ಮಡಿಕೇರಿ, ಆ. 2: ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ ಈಗ ಸಂಪೂರ್ಣ ಐದು ವರ್ಷಕ್ಕೆ ನಿಗದಿಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರು ಜಿ.ಪಂ.ನ ಅವಧಿ ಪೂರ್ಣಗೊಳ್ಳುವ ತನಕವೂ ನಿರಾತಂಕವಾಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಈ ಬಾರಿಯೂ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 29 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 18ರಷ್ಟಿದೆ.
ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮಡಿಕೇರಿ ತಾಲೂಕಿನ ಕಡಗದಾಳು ಕ್ಷೇತ್ರದಿಂದ ಚುನಾಯಿತರಾಗಿರುವ ಬಿ.ಎಂ. ಹರೀಶ್, ಅಧ್ಯಕ್ಷರಾಗಿ ಹಾಗೂ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಕ್ಷೇತ್ರದ ಸದಸ್ಯ ಲೋಕೇಶ್ವರಿ ಗೋಪಾಲ್ ಅವರು ಈಗಾಗಲೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಎರಡು ಸ್ಥಾನದ ವಿಚಾರ ಅಂತಿಮವಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ 29.4.2016ರಂದು ನಡೆದಿದೆ. ಜಿ.ಪಂ.ನ ಹೊಸ ಆಡಳಿತ ಅಧಿಕಾರಕ್ಕೆ ಬಂದು ಇದೀಗ ಮೂರು ತಿಂಗಳು ಪೂರ್ಣಗೊಂಡಿದೆ. ಆದರೆ, ಜಿ.ಪಂ.ನಲ್ಲಿ ಮತ್ತೊಂದು ಪ್ರಮುಖ ಸ್ಥಾನವಾಗಿರುವ ಮೂರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಜಿ.ಪಂ.ನಲ್ಲಿ ಒಟ್ಟು 5 ಸ್ಥಾಯಿ ಸಮಿತಿ ಬರುತ್ತದೆಯಾದರೂ ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿ.ಪಂ. ಅಧ್ಯಕ್ಷರು ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಉಪಾಧ್ಯಕ್ಷರೇ ನಿಯಮದಂತೆ ಇರುತ್ತಾರೆ.
ಇನ್ನುಳಿದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಹಾಗೂ ಕೃಷಿ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಜಿ.ಪಂ. ಅಧಿಕಾರಕ್ಕೆ ಬಂದು ಎರಡು ತಿಂಗಳಲ್ಲಿ ಈ ಆಯ್ಕೆ ನಡೆಯಬೇಕಿತ್ತಾದರೂ ಬಹುತೇಕ ಒಂದು ತಿಂಗಳು ವಿಳಂಬವಾಗಿದೆ. ಇದೀಗ ಆಗಸ್ಟ್ 9ರಂದು ಪ್ರಥಮ ಕೆಡಿಪಿ ಸಭೆ ನಿಗದಿಯಾಗಿದ್ದು, ತಾ. 8ರೊಳಗೆ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲು ಕಸರತ್ತು ನಡೆಯುತ್ತಿದೆ. 18 ಸದಸ್ಯರ ಪೈಕಿ ಒಬ್ಬರು ಅಧ್ಯಕ್ಷರು ಹಾಗೂ ಇನ್ನೊಬ್ಬರು ಉಪಾಧ್ಯಕ್ಷರಾಗಿದ್ದಾರೆ. ಇನ್ನುಳಿದ 16ಮಂದಿ ಸದಸ್ಯರ ಪೈಕಿ ಬಹುತೇಕ 13ಮಂದಿ ಈ ಸ್ಥಾನಾಕಾಂಕ್ಷಿಗಳಾಗಿದ್ದಾರೆನ್ನಲಾಗಿದ್ದು, ವರಿಷ್ಠರ ಮೇಲೆ ಒತ್ತಡದೊಂದಿಗೆ ತಮ್ಮ ಬೇಡಿಕೆ ಮುಂದಿರಿಸಿದ್ದಾರೆ.
ಕೆಲವು ಮೂಲದ ಪ್ರಕಾರ ಈ ಬಾರಿ ವೀರಾಜಪೇಟೆ ತಾಲೂಕಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನದ ಪ್ರಾತಿನಿಧ್ಯ ಸಿಗದಿರುವದರಿಂದ ವೀರಾಜಪೇಟೆ ತಾಲೂಕಿಗೆ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯ ಕೇಳಿ ಬಂದಿದೆ ಎನ್ನಲಾಗಿದೆ. ಮೂರು ತಾಲೂಕಿಗೂ ತಲಾ ಒಂದೊಂದು ಸ್ಥಾನ ನೀಡುವ ಕುರಿತು ಚರ್ಚೆ ಕೇಳಿ ಬರುತ್ತಿದೆ. ಮಡಿಕೇರಿ ತಾಲೂಕಿಗೆ ಜಿ.ಪಂ. ಅಧ್ಯಕ್ಷ ಸ್ಥಾನ ಇರುವದರಿಂದ ವೀರಾಜಪೇಟೆ ಎರಡು ಸ್ಥಾನ ನೀಡಿದರೆ, ಸೋಮವಾರಪೇಟೆಗೆ ಒಂದು ಸ್ಥಾನ ನೀಡುವ ಕುರಿತು ಮಾತು ಕೇಳಿ ಬಂದಿದೆ. ಆದರೆ ಯಾವದೂ ಇನ್ನೂ ಅಂತಿಮಗೊಂಡಿಲ್ಲ. ಸ್ಥಾಯಿ ಸಮಿತಿಗೆ ಸಂಬಂಧಿಸಿದಂತೆ ಈಗಾಗಲೇ ಪಕ್ಷದ ಕೋರ್ಕಮಿಟಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಬೇಡಿಕೆ ಇದ್ದರೂ ಎಲ್ಲರೂ ವರಿಷ್ಠರ ಸೂಚನೆಗೆ ಬದ್ಧರಾಗಿರುವದಾಗಿ ತಿಳಿಸಿದ್ದಾರೆ.
30.6.2016 ರಂದು ನಡೆದ ಜಿ.ಪಂ.ನ ಪ್ರಥಮ ಸಾಮಾನ್ಯ ಸಭೆಯಲ್ಲಿ ಸ್ಥಾಯಿಸಮಿತಿ ಆಯ್ಕೆಗೆ ಸಂಬಂಧಿಸಿದಂತೆ ಅಧ್ಯಕ್ಷರಿಗೆ ಅಧಿಕಾರ ನೀಡಲು ಒಪ್ಪಿಗೆ ನೀಡಲಾಗಿದ್ದು, ಅಧ್ಯಕ್ಷರು ಈಗಾಗಲೇ ಸಮಿತಿಗೆ 7ಮಂದಿಯ ಹೆಸರನ್ನು ಶಿಫಾರಸು ಮಾಡಿ ಪಟ್ಟಿ ನೀಡಿರುವದಾಗಿ ತಿಳಿದು ಬಂದಿದೆ. ಆದರೆ ಅಧ್ಯಕ್ಷರ ಆಯ್ಕೆ ಅಂತಿಮ ಗೊಳ್ಳಬೇಕಿದೆ. ವಿಪಕ್ಷ ಸದಸ್ಯರಿಗೂ ಅವಕಾಶ ದೊರೆತರೂ ಕೇವಲ ಸದಸ್ಯರಾಗಿ ಮಾತ್ರ ಇರುತ್ತಾರೆ.
ವೀರಾಜಪೇಟೆ ತಾಲೂಕಿನಿಂದ ಮೂಕೋಂಡ ವಿಜು ಸುಬ್ರಮಣಿ, ಮೂಕೋಂಡ ಶಶಿ ಸುಬ್ರಮಣಿ, ಸಿ.ಕೆ. ಬೋಪಣ್ಣ, ಅಚ್ಚಪಂಡ ಮಹೇಶ್, ಅಪ್ಪಂಡೇರಂಡ ಭವ್ಯ, ಮಡಿಕೇರಿ ತಾಲೂಕಿನಿಂದ ಮುರಳಿ, ನೆಲ್ಲಚಂಡ ಕಿರಣ್, ಕವಿತಾ ಪ್ರಭಾಕರ್, ಕುಮಾರ್, ಸೋಮವಾರಪೇಟೆ ತಾಲೂಕಿನಿಂದ ದೀಪಕ್, ಪೂರ್ಣಿಮಾ ಗೋಪಾಲ್, ಮಂಜುಳಾ ಶ್ರೀನಿವಾಸ್ ಅವರುಗಳು ಆಕಾಂಕ್ಷಿಗಳಾಗಿ ವರಿಷ್ಠರಲ್ಲಿ ತಮ್ಮ ಬೇಡಿಕೆ ಮುಂದಿರಿಸಿರುವದಾಗಿ ಹೇಳಲಾಗಿದೆ. ಇದೀಗ ಆಗಸ್ಟ್ 9ರ ಕೆಡಿಪಿ ಸಭೆಗೆ ಮುನ್ನ ಪಕ್ಷದ ಕೋರ್ಕಮಿಟಿ ಮತ್ತೊಂದು ಸಭೆ ನಡೆಸಿ ಆಯ್ಕೆಯನ್ನು ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದೆ. ಸ್ಥಾಯಿ ಸಮಿತಿಯ ಅವಧಿ ತಲಾ 20 ತಿಂಗಳ ಅವಧಿಯದ್ದಾಗಿರು ವದರಿಂದ ಅಧಿಕಾರ ಹಂಚಿಕೆಯ ಸೂತ್ರದೊಂದಿಗೆ ಪ್ರಥಮ ಅವಧಿಗೆ ಅಧ್ಯಕ್ಷರ ಆಯ್ಕೆ ನಡೆಯುವ ನಿರೀಕ್ಷೆಯಿದೆ.
ಜಿ.ಪಂ.ನ ಅವಧಿ ಮುಗಿಯುವ ಒಳಗೆ ಮುಂದಿನ ವಿಧಾನಸಭಾ ಚುನಾವಣೆಯೂ ಎದುರಾಗಲಿರು ವದರಿಂದ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ನಡೆಯುವ ಸಾಧ್ಯತೆ ಕಂಡು ಬಂದಿದೆ.