ಮಡಿಕೇರಿ, ಜೂ. 7: ರಾಜಕಾರಣದಲ್ಲಿ ಎಲ್ಲೂ ನೆಲೆಯಿಲ್ಲದ ಎ.ಕೆ. ಸುಬ್ಬಯ್ಯ ಅವರು ಹತಾಶೆಯಿಂದ ಕರ್ನಾಟಕ ರಾಜ್ಯವನ್ನು ಬಿಜೆಪಿ ಮುಕ್ತ ಮಾಡಬೇಕೆಂದು ಕರೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ಮೇಕೇರಿ ಘಟಕದ ಅಧ್ಯಕ್ಷ ಪಣತಿ ಉದಯಕುಮಾರ್, ಹಾಕತ್ತೂರು ಘಟಕದ ಅಧ್ಯಕ್ಷÀ ಪರ್ಲಕೋಟಿ ಸಜನ್ ಹಾಗೂ ಕಡಗದಾಳು ಘಟಕದ ಅಧ್ಯಕ್ಷ ಬಿ.ಬಿ. ಮಹೇಶ್ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಅಧಿಕಾರದ ಗದ್ದುಗೆಯೇರಿರುವ ಭಾರತೀಯ ಜನತಾ ಪಕ್ಷ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ. ಇದು ದೇಶದ ಜನರಿಗೆ ತಿಳಿದಿರುವ ಸತ್ಯಾಂಶವಾಗಿದೆ ಎಂದಿದ್ದಾರೆ.
ಯಾವದೇ ರಾಜಕೀಯ ಪಕ್ಷಗಳು ಹತ್ತಿರಕ್ಕೆ ಬಿಟ್ಟುಕೊಳ್ಳದಿದ್ದರೂ ಎ.ಕೆ. ಸುಬ್ಬಯ್ಯ ಅವರು ಕಾಂಗ್ರೆಸ್ ವಕ್ತಾರರಂತೆ ಹೇಳಿಕೆ ನೀಡುತ್ತಿರುವದು ಹಾಸ್ಯಾಸ್ಪದವಾಗಿದೆ. ಇನ್ನೆರಡು ವರ್ಷದಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು, ಎ.ಕೆ. ಸುಬ್ಬಯ್ಯ ಅವರು ಕಾಂಗ್ರೆಸ್ನಿಂದ ಸ್ಪರ್ಧೆಗಿಳಿದು ಜಯ ಸಾಧಿಸಲಿ ಎಂದು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಸವಾಲು ಹಾಕಿದ್ದಾರೆ.