ಸುಂಟಿಕೊಪ್ಪ, ನ. 13: ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಶಿಕ್ಷಣ ಸಚಿವ ತನ್ವೀರ್‍ಸೇಠ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಯನ್ನು ಬಿ.ಜೆ.ಪಿ. ವತಿಯಿಂದ ನಡೆಸಲಾಯಿತು.

‘ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಧಿಕ್ಕಾರ, ಶಿಕ್ಷಣ ಸಚಿವರು ರಾಜಿನಾಮೆ ನೀಡಲಿ’ ಮೊದಲಾದ ಘೋಷಣೆ ಗಳನ್ನು ಪ್ರತಿಭಟನಾಕಾರರು ಕೂಗಿದರು.

ಡಿ. ನರಸಿಂಹ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಕಾಂತರೈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರು ತನ್ನ ಸ್ಥಾನದಲ್ಲಿದ್ದುಕೊಂಡು ಅರೆನಗ್ನ ಚಿತ್ರ ವೀಕ್ಷಿಸಿರುವದು ಖಂಡನೀಯ. ಸಚಿವರ ಈ ವರ್ತನೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದ್ದು, ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆಯನ್ನು ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ವಿಮಾಲಾವತಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಿ. ಚಂದ್ರ, ಗಿರಿಜಾ ಉದಯ್, ಕ್ಷೇತ್ರ ಸಮಿತಿ ಅಧ್ಯಕ್ಷ ಪಟ್ಟಮನೆ ಕೆ. ಶೇಷಪ್ಪ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನೀಲ್, ಯುವ ಮೋರ್ಚಾ ಅಧ್ಯಕ್ಷ ಬಿ.ಕೆ. ರಂಜಿತ್ ಪೂಜಾರಿ, ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್, ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ (ಕೊಕಾ), ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಮತ್ತಿತರರು ಇದ್ದರು.