ಶ್ರೀಮಂಗಲ, ಅ. 4: ಶ್ರೀಮಂಗಲ ಪಟ್ಟಣದಲ್ಲಿ ಸ್ಥಾಪಿಸಿರುವ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆಯಲ್ಲಿ ಕಳೆದ 2 ದಿನಗಳಿಂದ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ಇಲಾಖಾ ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಶ್ರೀಮಂಗಲ ವ್ಯಾಪ್ತಿಯ ದೂರವಾಣಿ ಗ್ರಾಹಕರು, ಬ್ಯಾಂಕ್‍ನಲ್ಲಿ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡು ಗ್ರಾಹಕರು ಪರದಾಡಿದರಲ್ಲದೆ ಇಲಾಖೆಯ ಮೇಲೆ ಹಿಡಿಶಾಪ ಹಾಕಿದರು.. ಈ ಸಂದರ್ಭ ದೂರವಾಣಿ ಕೇಂದ್ರಕ್ಕೆ ತೆರಳಿ ಪ್ರತಿಭಟನೆ ನಡೆಸಿದ ಸಂಘ - ಸಂಸ್ಥೆಯ ಪ್ರಮುಖರು ಹಿರಿಯ ಅಧಿಕಾರಿಗಳನ್ನು ಬೇರೆ ನೆಟ್‍ವರ್ಕ್‍ನ ದೂರವಾಣಿಯಲ್ಲಿ ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಗಿತವಾಗಿರುವ ದೂರವಾಣಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ಕಾರರು, ಬಿ.ಎಸ್.ಎನ್.ಎಲ್ ಇಲಾಖೆಯ ಅಧಿಕಾರಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ವಿಫಲರಾಗಿದ್ದು, ಖಾಸಗಿ ದೂರವಾಣಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ 900 ಸ್ಥಿರ ದೂರವಾಣಿ ಸಂಪರ್ಕ ನೀಡಿದ್ದರೂ ಗ್ರಾಹಕರ ಕುಂದುಕೊರತೆಗೆ ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ 700 ದೂರವಾಣಿಯನ್ನು ಇಲಾಖೆಗೆ ಹಿಂದಿರುಗಿಸಿದ್ದಾರೆ. 500 ವಯರ್ ಲೆಸ್ ವಿಲ್ ದೂರವಾಣಿಗಳಲ್ಲಿ 100 ಮಾತ್ರ ಚಾಲನೆಯಲಿದ್ದು, ಕೇಂದ್ರ ವ್ಯಾಪ್ತಿಯಲ್ಲಿ 100 ಇಂಟರ್‍ನೆಟ್ ಸಂಪರ್ಕ ನೀಡಿದರೂ ಸರಿಯಾಗಿ ಸೇವೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಶ್ರೀಮಂಗಲ ದೂರವಾಣಿ ಕೇಂದ್ರದ ಸುತ್ತಮುತ್ತ ಕಾಡು ಬೆಳೆದಿದ್ದು, ಎಲ್ಲೆಂದರಲ್ಲಿ ದೂರವಾಣಿ ಸಂಬಂಧಿಸಿದ ಸಾಮಗ್ರಿಗಳನ್ನು ಎಸೆಯಲಾಗಿದೆ. ಕೇಂದ್ರವು ಗುಜರಿ ಅಂಗಡಿಯಂತೆ ಗೋಚರಿಸುತ್ತಿದೆ. ಇದು ಇಲಾಖೆಯ ಕಾರ್ಯವೈಖರಿಗೆ ಸಾಕ್ಷಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಈ ಸಂದರ್ಭ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಶ್ರೀಮಂಗಲ ವಲಯ ಕಾಂಗ್ರೆಸ್ ಅಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ, ಜಿಲ್ಲಾ ರೈತ ಸಂಘ ಸಂಚಾಲಕ ಚಿಮ್ಮಂಗಡ ಗಣೇಶ್, ಶ್ರೀಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಚೊನೀರ ಕಾಳಯ್ಯ, ಶ್ರೀಮಂಗಲ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಪ್ರಮುಖರಾದ ಬಾಚಮಾಡ ದಾದ ದೇವಯ್ಯ, ಐಪುಮಾಡ ಶಂಭು ದೇವಯ್ಯ, ಬಾದುಮಂಡ ವಿಜಯ, ಮಂದಮಾಡ ವೇಣು, ಬೋಡಂಗಡ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.