ಶ್ರೀಮಂಗಲ, ಅ. 19: ಬಾಳೆಲೆ ಸುತ್ತಮುತ್ತ ಮತ್ತೆ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಬುಧವಾರ ಹಾಡಹಗಲೇ ಕಾರ್ಮಿಕರ ಎದುರಿನಲ್ಲೇ ಹುಲಿ ಹಸುವಿನ ಮೇಲೆ ಧಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ. ಗ್ರಾಮದ ಅಳಮೇಂಗಡ ರಿವಿನಾ ಮೇದಪ್ಪ ಅವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಾಲು ಕರೆಯುವ ಹಸುವನ್ನು ಸುತ್ತಮುತ್ತ ಕೆಲಸ ಮಾಡುತ್ತಿದ್ದ ಕಾರ್ಮಿಕರ ಎದುರಿನಲ್ಲೇ ಹುಲಿ ಧಾಳಿ ಮಾಡಿ ಕೊಂದು ಹಾಕಿದೆ. ಕಳೆದ ಮೂರು ದಿನದ ಹಿಂದೆ ರಿವಿನಾ ಮೇದಪ್ಪ ಅವರ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಲಕ್ಷ್ಮಿಕಾಂತ್ ಅವರಿಗೆ ಸೇರಿದ ಒಂದು ಕರುವಿನ ಕಾಲನ್ನು ಧಾಳಿ ನಡೆಸಿ ಹುಲಿ ತಿಂದು ಹಾಕಿದ್ದು ಇನ್ನೊಂದು ಕರು ಹುಲಿ ಧಾಳಿ ವೇಳೆ ಓಡಿದಾಗ ಕಾಲು ಮುರಿದುಕೊಂಡಿದ್ದು, ಕರುವಿನ ಹಲವು ಭಾಗಕ್ಕೆ ಹುಲಿಯಿಂದ ಗಾಯ ಉಂಟಾಗಿದೆ. ಬಾಳೆಲೆ, ನಿಟ್ಟೂರು, ರಾಜಪುರ, ಸುಳುಗೋಡು ವ್ಯಾಪ್ತಿಗಳಲ್ಲಿ ಕಳೆದ ಎರಡು ವರ್ಷದಿಂದ ಹುಲಿ ಹಾವಳಿ ಕಾಣಿಸಿಕೊಂಡಿದ್ದು ಜನರು ಭಯಭೀತರಾಗಿದ್ದಾರೆ.
ಅಳಮೇಂಗಡ ರಿವಿನಾ ಮೇದಪ್ಪ ಅವರಿಗೆ ಸೇರಿದ ಐದು ಹಸುಗಳು ಕಳೆದ ಒಂದೂವರೆ ವರ್ಷದಲ್ಲಿ ಹುಲಿ ಧಾಳಿಗೆ ತುತ್ತಾಗಿ ಸಾವಿಗೀಡಾಗಿದೆ ಎಂದು ರಿವಿನಾ ಮೇದಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯಿಂದ ನಮಗೆ ಯಾವದೇ ಪರಿಹಾರ ಬೇಕಿಲ್ಲ. ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆಗೆ ಇದುವರೆಗೆ ಸಾಧ್ಯವಾಗಿಲ್ಲ. ಹುಲಿಗೆ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸುವ ಕಾರ್ಯಾಚರಣೆ ನಡೆಸಬೇಕು. ಇಲ್ಲದಿದ್ದರೆ ಹುಲಿ ಸೆರೆ ಅಸಾಧ್ಯ ಎಂದು ಹೇಳಿದ್ದಾರೆ
ಕಲ್ಲಳ ಅರಣ್ಯ ವಲಯಕ್ಕೆ ಸೇರುವ ಈ ವ್ಯಾಪ್ತಿಯಲ್ಲಿ ಕಂಡುಬಂದಿರುವ ಹುಲಿ ಹಾವಳಿಯನ್ನು ತಡೆಗಟ್ಟಲು ಹುಲಿ ಸೆರೆಗೆ ಗಂಭೀರ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದ್ದಿದ್ದರೆ ಈ ವ್ಯಾಪ್ತಿಯಲ್ಲಿ ತೋಟ ಗದ್ದೆಗಳಲ್ಲಿ ಕೆಲಸ ಮಾಡಲು ಹಾಗೂ ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗಲಿದೆ ಎಂದು ಬಾಳೆಲೆಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.