ಶ್ರೀಮಂಗಲ, ನ. 8 : ವಿವಾದಾತ್ಮಕ ವ್ಯಕ್ತಿ ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರಕಾರ ಮುಂದಾಗುವ ಮೂಲಕ ಕೊಡಗು ಜಿಲ್ಲೆಯಲ್ಲಿ ಕೋಮು ಸೌಹಾರ್ಧತೆ ಯನ್ನು ಹಾಳುಗೆಡವಿ ರಾಜಕೀಯ ಲಾಭ ಗಳಿಸಲು ಮುಂದಾಗಿದೆ ಎಂದು ಬಾಳೆಲೆ ನುಸ್ರತುಲ್ ಇಸ್ಲಾಂ ಮದ್ರಸಾದ ಆಡಳಿತ ಮಂಡಳಿಯ ಪ್ರಮುಖರು ತಿಳಿಸಿದ್ದಾರೆ.
ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆ ಹಾಗೂ ಜಯಂತಿಗಳಿಗೆ ಅವಕಾಶವಿಲ್ಲ. ಟಿಪ್ಪು ಜಯಂತಿ ಆಚರಣೆಗೆ ಇಸ್ಲಾಂ ಧರ್ಮದವರು ಕೇಳಿಲ್ಲ. ಈ ಹಿನ್ನೆಲೆಯಲ್ಲಿ ಸೌಹಾರ್ದಯುತವಾಗಿ ಬದುಕುತ್ತಿರುವ ಜಿಲ್ಲೆಯ ಜನರ ನಡುವೆ ಹುಳಿ ಹಿಂಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಆದ್ದರಿಂದ ಟಿಪ್ಪು ಜಯಂತಿ ಆಚರಣೆಯನ್ನು ಬಾಳೆಲೆ ನುಸ್ರತುಲ್ ಇಸ್ಲಾಂ ಮದ್ರಸಾದಲ್ಲಿ ಆಚರಿಸದಿರಲು ನಿರ್ಧರಿಸಲಾಗಿದೆ ಎಂದು ಮದ್ರಸಾದ ಉಪಾಧ್ಯಕ್ಷ ಎಂ.ಎಂ. ಫಯಾಜ್ ತಿಳಿಸಿದ್ದಾರೆ.
ಮದ್ರಸಾದ ಕಾರ್ಯದರ್ಶಿ ಕೆ.ಹೆಚ್. ಆರೀಫ ಮಾತನಾಡಿ, ಬಾಳೆಲೆ ವ್ಯಾಪ್ತಿಯಲ್ಲಿ ಎಲ್ಲ ಧರ್ಮದವರು ಅನ್ಯೋನ್ಯವಾಗಿ ಬಾಳುತ್ತಿದ್ದೇವೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಸ್ವಂತ ಲಾಭಕ್ಕಾಗಿ ಆತ ಯುದ್ದ ಮಾಡಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಆತನ ಆಡಳಿತದಲ್ಲಿ ಕೊಲೆ ಸುಲಿಗೆ, ಮತಾಂತರ, ಅತ್ಯಾಚಾರ, ದೇವಸ್ಥಾನ, ಐನ್ಮನೆಗಳ ಮೇಲೆ ಧಾಳಿ ಇಂತಹ ಕ್ರೌರ್ಯಗಳನ್ನೆ ಮಾಡಿರುವ ಟಿಪ್ಪು ಈ ಕಾವೇರಮ್ಮನ ಭೂಮಿಯಲ್ಲಿ ಯಾವದೇ ಒಳ್ಳೆಯ ಕೆಲಸ ಮಾಡಿಲ್ಲ. ಮುಸ್ಲಿಮರಿಗೂ ಸಹ ಈತ ಒಳ್ಳೆಯದು ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ವಿಷಬೀಜ ಬಿತ್ತುವಂತಹ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ಹೇಳಿದರು. ಟಿಪ್ಪು ಜಯಂತಿಯನ್ನು ನಿಷೇಧಿಸುವಂತೆ ಒತ್ತಾಯಿಸಿದರು. ಮದರಸದ ಅಧ್ಯಕ್ಷ ರಹೀಮ್ ಹಾಗೂ ಸಮಿತಿ ಸದಸ್ಯ ಅಕ್ಬರ್ ಅವರು ಜಿಲ್ಲೆಯ ಹೊರಗೆ ತೆರಳಿರುವದರಿಂದ ಈ ಸಂದರ್ಭ ಅವರು ಹಾಜರಿರಲಿಲ್ಲ.