ವೀರಾಜಪೇಟೆ, ಜ: 8 ವೀರಾಜಪೇಟೆ ಬಳಿಯ ಬಾಳುಗೋಡು ಕೊಡವ ಫೆಡರೇಶನ್ ಒಕ್ಕೂಟದ ಸಾಂಸ್ಕøತಿಕ ಕೇಂದ್ರದ ಹಿಂಭಾಗದ ಗುಡ್ಡೆಯ ಮೇಲೆ ಪ್ರಾಚೀನ ಶಿಲಾಯುಗದ ಶಿಲಾ ಶಾಸನ ಪತ್ತೆಯಾಗಿದೆ.ಕೊಡವ ಸಮಾಜದ ಫೆಡರೇಶನ್‍ಗೆ ಸೇರಿದ ಜಾಗದ ಸುಮಾರು 500 ಮೀಟರ್ ಉದ್ದ, 200 ಮೀಟರ್ ಅಗಲ, 200 ಮೀಟರ್ ಎತ್ತರದಲ್ಲಿ ಪ್ರಾಚೀನ ಶಿಲೆಗಳು ಕೊಡಗಿನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು ವಿಶೇಷವೆನಿಸಿದೆ.
ಎರಡು ತಿಂಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಉಪ ಅಧೀಕ್ಷಕ ನಾಯಕಂಡ ಸಿ. ಪ್ರಕಾಶ್ ಅವರು ಬಾಳುಗೋಡು ಸಾಂಸ್ಕøತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿ ಅದೇ ಕೇಂದ್ರದ 200 ಮೀಟರ್ ಅಂತರದಲ್ಲಿ ಮೈದಾನದ ಪಕ್ಕದ ಗುಡ್ಡದಲ್ಲಿ ಸಂಚರಿಸಿದಾಗ ಕ್ರಿಸ್ತಶಕ ಎರಡನೇ ಶತಮಾನದ ಈ ಪ್ರಾಚೀನ ಶಿಲಾಯುಗದ ಕಲ್ಲುಗಳ ಪೈಕಿ ಶಿಲಾಯುಗದ ಮಾದರಿಯ ಲಿಪಿ ಪತ್ತೆಯಾಗಿದ್ದು, ಇದು ಶಾತವಾಹನ ಕಾಲದ ಶಿಲೆಗಳೆಂದು ಸಂಶೋಧನೆ ಯಿಂದ ಪತ್ತೆ ಹಚ್ಚಲಾಗಿದೆ. ಪ್ರಾಚೀನ ಕಾಲದ ಈ ಜಾಗಕ್ಕೆ ಇಂದು ಪ್ರಕಾಶ್ ಅವರು ಮಾಧ್ಯಮದವರನ್ನು ಕರೆದೊಯ್ದು ಮಾಹಿತಿ ನೀಡಿದರು.
ಪ್ರಾಚೀನ ಕಾಲದ ಶಿಲಾಯುಗದ ಒಂದೇ ಅಳತೆಯ ಎರಡು ಗುಡ್ಡೆಗಳು ಅಕ್ಕ ಪಕ್ಕದಲ್ಲಿದ್ದು, ಸುಮಾರು 200ಮೀಟರ್ ಎತ್ತರದಲ್ಲಿ ನಾಲ್ಕು ಹಂತದಲ್ಲಿ ಪ್ರಾಚೀನ ಕಾಲದ ಶಿಲೆಗಳಿಂದ ತಳಹದಿ ಹಾಕಿರುವದು ಕಂಡು ಬಂದಿದೆ. ಈ ಜಾಗದಲ್ಲಿ ನೂರಾರು ಶಿಲೆಗಳಿದ್ದು ಈ ಪೈಕಿ ಕೆಲವು ಶಿಲೆಗಳಲ್ಲಿ ಶಾಸನ ಬರೆಯಲಾಗಿರುವದನ್ನು ಪತ್ತೆ ಹಚ್ಚಲಾಗಿದೆ. ಕೆಲವು ಶಿಲೆಗಳನ್ನು ಕಟ್ಟಡ ಕಟ್ಟುವ ಸಲುವಾಗಿ ಕೆತ್ತಲಾಗಿದೆ. ಜಾಗದಲ್ಲಿದ್ದ ಒಂದು ಶಿಲೆಯಲ್ಲಿ ‘ಅಪಾವಮಾಚ’ ಎಂದು ಬರೆದಿದ್ದು, ಈಚೆಗಿನ ಶಾತವಾಹನ ಕಾಲದ ಬ್ರಾಹ್ಮಿ ಲಿಪಿ ಎಂದು ಸಂಶೋಧನೆಯಿಂದ ಕಂಡು ಹಿಡಿಯಲಾಗಿದ್ದು ಇದರಲ್ಲಿ ಯಾರೋ ಒಬ್ಬರ ಪ್ರಮುಖ ಹೆಸರನ್ನು ಬರೆಯಲಾಗಿದೆ ಎಂದು ಊಹಿಸಲಾಗಿದೆ. ಈ ಲಿಪಿ ನೂರರಿಂದ ಮುನ್ನೂರ ವರ್ಷದವರಗೆ ಬದಲಾವಣೆಗೊಳಪಡುತ್ತಿದ್ದು ಈಗ ಅದು ಪ್ರಸಕ್ತ ಸಾಲಿನ ಲಿಪಿಗೆ ಸರಿ ಸಮಾನವಾಗಿದೆ.
ಬಾಳುಗೋಡು ಗ್ರಾಮದ ಈ ಎರಡು ಗುಡ್ಡೆಗಳನ್ನು ಉತ್ಖಲನ ಮಾಡಿದಾಗ (ಎಕ್ಷವೇಶನ್) ಪ್ರಾಚೀನ ಕಾಲದ ಇನ್ನಷ್ಟು ಸಾಕ್ಷ್ಯಧಾರಗಳು ದೊರೆಯಲಿವೆ. ಈ ಬ್ರಾಹ್ಮಿ ಲಿಪಿಯ ಶಾಸನವನ್ನು ಗಮಿನಿಸಿದಾಗ ಗಂಗರಿಗಿಂತ ಮೊದಲು ಶಾತವಾಹನರು ನೆಲೆಸಿದ್ದರು ಎಂಬದನ್ನು ಪುಷ್ಟೀಕರಿಸುತ್ತದೆ. ಈ ಶಿಲಾ ಶಾಸನಗಳನ್ನು ನೋಡಿದಾಗ ಕಲ್ಲನ್ನು ಸಮತಟ್ಟು ಮಾಡಿ ಕಲ್ಲಿನಿಂದ ಉಜ್ಜಿ ಶಾಸನ ಬರೆಯಲಾಗಿರುವದು ಎದ್ದು ಕಾಣುತ್ತದೆ. ಪ್ರಾಚೀನ ಕಾಲದ ಬೃಹತ್ ಶಿಲಾಯುಗದ ಅವಶೇಷಗಳು, ಕೊಠಡಿಯಂತೆ ಕಾಣುವಂತಹ ಕಾವಲು ಗೋಪುರ ಇದ್ದಿರಬಹುದು ಎಂದು ಊಹಿಸಬಹುದು. ಕಾವಲು ಗೋಪುರ ಕಟ್ಟಡ ನಿರ್ಮಿಸಿದ ಕುರುಹುಗಳು (ಡಾಲ್ಮೆನ್) ಇದೇ ಭೂಮಿಯಲ್ಲಿ ಅಡಕವಾಗಿದೆ ಎಂಬದನ್ನು ಡಾ. ಮೋಂಗ್ಲಿಂಗ್ 1856ರಲ್ಲಿ ಕಂಡು ಹಿಡಿದಿದ್ದರು ಎಂದು ಕೊಡಗು ಗೆಜೆಟಿಯರ್‍ನಲ್ಲಿ ಮಾಹಿತಿ ನೀಡಲಾಗಿರುವದನ್ನು ಇಲ್ಲಿ ಸ್ಮರಿಸಬಹುದು.