ಗೋಣಿಕೊಪ್ಪಲು, ಆ. 18: ವೀರಾಜಪೇಟೆ ಸಮೀಪ ಬಾಳುಗೋಡು ಏಕಲವ್ಯ ವಸತಿ ಶಾಲೆಗೆ ಉಸ್ತುವಾರಿ ಸಚಿವರು ದಿಢೀರ್ ಭೇಟಿ ನೀಡಿದ ಕೇವಲ 15 ದಿನಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಗುಜರಾತ್ ಬಾಯ್ಲರ್ ಬಿಸಿನೀರು ವ್ಯವಸ್ಥೆ, ಅಕ್ವಾಗಾರ್ಡ್ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಗೀಸರ್ ಒಲೆಗಳು, ಹೊಸಾ ಹಾಸಿಗೆ, ತಟ್ಟೆ ಹಾಗೂ ಲೋಟಾ ಒಳಗೊಂಡಂತೆ ಸುಮಾರು ರೂ.6 ಲಕ್ಷ ಅನುದಾನ ಬಿಡುಗಡೆ ಮೂಲಕ ಪೂರಕ ವ್ಯವಸ್ಥೆ ಕಲ್ಪಿಸಲಾದ ಕುರಿತು ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಮಾಹಿತಿ ನೀಡಿದ್ದಾರೆ.
ಮಳೆಗಾಲದಲ್ಲಿಯೂ ತಣ್ಣೀರು ಬಳಸ ಬೇಕಾದ ವಿಷಮ ಪರಿಸ್ಥಿತಿ ಕುರಿತು ಏಕಲವ್ಯ ವಸತಿ ಶಾಲಾ ಮಕ್ಕಳು ಉಸ್ತುವಾರಿ ಸಚಿವ ಸೀತಾರಾಂ ಅವರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆ ಸುಮಾರು ರೂ.88 ಸಾವಿರ ಮೊತ್ತದ ಗುಜರಾತ್ ಬಾಯ್ಲರ್‍ಗಳನ್ನು ಬೆಂಗಳೂರು ಯಶವಂತಪುರದ ಮುನೇಶ್ವರ ಎಂಟರ್ ಪ್ರೈಸಸ್ ಮೂಲಕ ಸರಬರಾಜು ಮಾಡಿ ಅಳವಡಿಸಲಾಗಿದೆ.
ಜಿಲ್ಲಾ ಪಂಚಾಯತ್, ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅನ್ವಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಗೊಳಪಡುವ ಬಾಳುಗೋಡು ಏಕಲವ್ಯ ವಸತಿ ಶಾಲೆಗೆ ಜಿಲ್ಲಾಧಿಕಾರಿಗಳ ಅನುಮೋದನೆ ಮೇರೆ ಗುಜರಾತ್ ಬಾಯ್ಲರ್‍ಗಳನ್ನು ಒದಗಿಸಲಾಗಿದೆ.
ಇದೇ ಸಂದರ್ಭ ಕಿತ್ತುಹೋದ, ಕೊಳೆ ಹಿಡಿದ ಹಾಸಿಗೆ ಗಮನಕ್ಕೆ ಬಂದಿತ್ತು. ಕುಡಿಯಲು ಪರಿಶುದ್ಧ ನೀರು, ತಟ್ಟೆ, ಲೋಟ ಇತ್ಯಾದಿಗಳಿಗಾಗಿ ಇಲಾಖಾ ವತಿಯಿಂದ ಸರಬರಾಜು ಮಾಡಲು ಸುಮಾರು ರೂ.6 ಲಕ್ಷ ತಕ್ಷಣದಿಂದ ಮಂಜೂರಾತಿ ದೊರೆತಿದೆ ಎನ್ನಲಾಗಿದೆ.
ಗುಜರಾತ್ ಒಲೆಗಳನ್ನು ಸಚಿವ ಸೀತಾರಾಮ್ ಅವರ ಎಂ.ಎಸ್.ರಾಮಯ್ಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿಯೂ ಅಳವಡಿಸಲಾಗಿದ್ದು, ಖಾಲಿ ಪೇಪರ್ ಇತ್ಯಾದಿ ಸಣ್ಣ ಸೌದೆ ಚೂರುಗಳನ್ನು ಹಾಕಿದರೂ ಬೇಗನೆ ನೀರು ಬಿಸಿಯಾಗುವ ಉತ್ತಮ ಗುಣಮಟ್ಟದ ಗೀಸರ್ ಒಲೆಗಳನ್ನು ಏಕಲವ್ಯ ವಸತಿ ಶಾಲೆಗೂ ಅಳವಡಿಸಲಾಗಿದೆ. ಜಿಲ್ಲೆಯ ಹಲವು ವಸತಿ ಶಾಲೆಗಳಲ್ಲಿಯೂ ಗುಜರಾತ್ ಬಾಯ್ಲರ್‍ಗಳನ್ನು ಅಳವಡಿಸಲಾಗಿದ್ದು, ಗುಣಮಟ್ಟದಿಂದ ಕೂಡಿದೆ ಎನ್ನಲಾಗುತ್ತಿದೆ.
ಉಸ್ತುವಾರಿ ಸಚಿವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಆಶ್ರಮ ಶಾಲೆ ಹಾಗೂ ಸರ್ಕಾರಿ ಸ್ವಾಮ್ಯದ ವಸತಿ ಶಾಲೆಗಳಿಗೂ ದಿಢೀರ್ ಭೇಟಿ ನೀಡಿ ಸಮಸ್ಯೆಯನ್ನು ಖುದ್ದು ಆಲಿಸಲಿದ್ದಾರೆ ಎಂದು ಆಪ್ತರಾದ ಕದ್ದಣಿಯಂಡ ಹರೀಶ್‍ಬೋಪಣ್ಣ ಮಾಹಿತಿ ನೀಡಿದ್ದಾರೆ.
ಏಕಲವ್ಯ ವಸತಿ ಶಾಲೆಗೆ ಇತ್ತೀಚೆಗೆ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾಪ್ರಕಾಶ್ ಹಾಗೂ ಬಿಟ್ಟಂಗಾಲ ಜಿ.ಪಂ.ಸದಸ್ಯೆ ಅಪ್ಪಂಡೇರಂಡ ಭವ್ಯ ಅವರೂ ದಿಢೀರ್ ಭೇಟಿ ನೀಡಿ ಸಮಸ್ಯೆ ಆಲಿಸಿದ ಕುರಿತೂ ‘ಶಕ್ತಿ’ ವಿವರ ವರದಿ ಪ್ರಕಟಿಸಿತ್ತು.