ವೀರಾಜಪೇಟೆ, ಡಿ. 18: ಯಾವದೇ ಸಮುದಾಯದ ಸಮಾಜದಲ್ಲಿ ಶ್ರಮದ ದುಡಿಮೆ ಸಮುದಾಯದ ಏಳಿಗೆ ಅಭಿವೃದ್ಧಿ ಸಾಧ್ಯ, ಹೆಗ್ಗಡೆ ಸಮುದಾಯದ ಬಾಂಧವರು, ಪ್ರತಿಯೊಬ್ಬರು ವಿದ್ಯೆಗೆ ಆದ್ಯತೆ ನೀಡಿರುವದರಿಂದ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರು ಆದ ಡಾ. ತಂಬಂಡ ವಿಜೂ ಪೂಣಚ್ಚ ಹೇಳಿದರು.

ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘದಿಂದ ಬಾಳುಗೋಡು ಗ್ರಾಮದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೂತನ ಅತಿಥಿ ಗೃಹವನ್ನು ಉದ್ಘಾಟಿಸಿದ ವಿಜು ಪೂಣಚ್ಚ, ಇಂದಿನ ತಾಂತ್ರಿಕ ಯುಗದಲ್ಲಿ ಸಮುದಾಯದ ಯುವಕರು ರಚಿಸಿ ಕೊಂಡಿರುವ ವಾಟ್ಸ್ಯಾಪ್ ಗುಂಪುಗಳಲ್ಲಿ ಅನಾವಶ್ಯಕ ವಿಚಾರಗಳನ್ನು ವಿನಿಮಯ ಮಾಡಿಕೊಂಡು ದಾರಿ ತಪ್ಪುತ್ತಿರುವದು ವಿಷಾದನೀಯ. ಸಮುದಾಯದ ಬೆಳವಣಿಗೆಗೆ, ಪ್ರಗತಿಗೆ ಸಂಬಂಧಿಸಿದಂತೆ ಉತ್ತಮವಾದ ವಿಚಾರಗಳನ್ನು ಚರ್ಚಿಸಿ ಉತ್ತಮ ಸಮಾಜ ಹಾಗೂ ಸುಭದ್ರ ದೇಶ ಕಟ್ಟುವ ಕೆಲಸವಾಗಬೇಕಾಗಿದೆ. ಹೆಗ್ಗಡೆ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ಶೇಕಡ ನೂರರಷ್ಟು ಅಕ್ಷರಸ್ತರನ್ನು ಹೊಂದಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡಿರುವದು ಹೆಗ್ಗಡೆ ಸಮುದಾಯಕ್ಕೆ ಸಾಧನೆಯ ಹೆಮ್ಮೆಯನ್ನು ತಂದಿದೆ. ಅಮೇರಿಕಾದಲ್ಲಿ ಜ್ಯೂವ್ ಜನಾಂಗದ ಜನಸಂಖ್ಯೆ ವಿಶ್ವದ ಶೇ. 1.8 ರಷ್ಟಿದ್ದರೂ ಪ್ರತಿ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ.

ಚುನಾವಣೆಗೆ ಜನಸಂಖ್ಯೆಯ ಗಾತ್ರ ಮುಖ್ಯವಲ್ಲ. ಗೆದ್ದು ಬಂದ ಮೇಲೆ ನಿಷ್ಪಕ್ಷ ಸೇವೆ, ಜನರ ಸೇವೆ ಇಲ್ಲಿ ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐ.ಸಿ.ಎ.ಆರ್.ನ ವಿಶ್ರಾಂತ ಕುಲಪತಿ ಹಾಗೂ ನ್ಯಾಷನಲ್ ಪ್ರೊಫೆಸರ್ ಡಾ. ಪಡಿಞರಂಡ ಜಿ. ಚಂಗಪ್ಪ ಮಾತನಾಡಿ, ಸರಕಾರ ಕೊಡಗು ಹೆಗ್ಗಡೆ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡಿ ಉದ್ಯೋಗಕ್ಕೆ ಮಾತ್ರ ಅವಕಾಶ ನೀಡಿದೆ. ಈ ಮೀಸಲಾತಿಯನ್ನು ಸಮುದಾಯದ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸುವಂತೆ ರಾಜಕೀಯ ವ್ಯವಸ್ಥೆಗೆ ವಿಸ್ತರಿಸಿದರೆ ಸಮುದಾಯ ಸದಸ್ಯರಿಗೆ ಕನಿಷ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿನಿಧಿಸಲು ಸಾಧ್ಯವಾಗಲಿದೆ. ಇದನ್ನು ಸಮುದಾಯದ ಮುಖ್ಯಸ್ಥರು ಸರಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ರಾಜ್ಯ ಅಗ್ನಿಶಾಮಕ ದಳದ ನಿರ್ದೇಶಕ ಕೊಪ್ಪಡ ಯು. ರಮೇಶ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಮಾರಂಭದಲ್ಲಿ ತಂಬಾಂಡ ವಿಜೂ ಪೂಣಚ್ಚ ಹಾಗೂ ರಮೇಶ್ ಇವರುಗಳನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಡಿಞರಂಡ ಜಿ ಅಯ್ಯಪ್ಪ ಮಾತನಾಡಿ, ಸಮುದಾಯ ಬಾಂಧವರು ಸಂಘದ ಏಳಿಗೆ ಹಾಗೂ ಪ್ರಗತಿಗೆ ಪರಸ್ಪರ ಸಹಕರಿಸಬೇಕು. ಸಂಘಟನೆ ಸಂಘದ ಅಭಿವೃದ್ಧಿಗಾಗಿ ಮುಕ್ತವಾಗಿ ಶ್ರಮಿಸುತ್ತಿದೆ. ಉದಾರ ದಾನಿಗಳ ಸಹಕಾರದಿಂದ ಸಮಾಜವನ್ನು ಹಂತ ಹಂತವಾಗಿ

ಪ್ರಗತಿಯತ್ತ ಕೊಂಡೊಯ್ಯ ಲಾಗುತ್ತಿದೆ. ಸಮುದಾಯ ಬಾಂಧವರಲ್ಲಿ ಒಮ್ಮತವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಪ್ರತಿಯೊಬ್ಬರಲ್ಲಿ ಆಸಕ್ತಿ ಮುಖ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಉದ್ಯಮಿ ತೋರೆರ ಶೀಲಾ ರಾಜು. ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಅಧೀಕ್ಷಕರುಗಳಾದ. ಪಂದಿಕಂಡ ಗಣಪತಿ, ಪಂದಿಕಂಡ ಉತ್ತಪ್ಪ, ಪಂದಿಕಂಡ ಎಂ ಪೆಮ್ಮಯ್ಯ, ಬೆಟ್ಟಗೇರಿಯ ಕಾಫಿ ಬೆಳೆಗಾರರಾದ ಕಟ್ರತಂಡ ಉಷಾ ಉತ್ತಯ್ಯ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಘದ ಉಪಾಧ್ಯಕ್ಷ ಕೋರಕುಟ್ಟಿರ ಸ.ರ. ಚಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಘದ ನಿರ್ದೇಶಕ ಪಡಿಞರಂಡ ಪ್ರಭು ಕುಮಾರ್ ನಿರೂಪಿಸಿ, ಸಂಘದ ತೊರೇರ ಮುದ್ದಯ್ಯ ವಂದಿಸಿದರು.