ಮಡಿಕೇರಿ, ಸೆ. 16: ಬಾಲಕಿಯರ ಬಾಲಮಂದಿರದಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೋಟರಿ ಮಿಸ್ಟಿ ಹಿಲ್ಸ್, ಮುಳಿಯ ಪ್ರತಿಷ್ಠಾನ ಮತ್ತು ಶಕ್ತಿ ಪ್ರತಿಷ್ಠಾನದ ವತಿಯಿಂದ ಮಂದಿರದ ವಿದ್ಯಾರ್ಥಿನಿಯರಿಗೆ ಕಿವಿ ಚುಚ್ಚುವಿಕೆ, ಬಟ್ಟೆ ವಿತರಣೆ, ಸಸ್ಯಗಳ ಮಾಹಿತಿ ಕಾರ್ಯಕ್ರಮ, ಮಕ್ಕಳಿಂದ ಹಾಡು ಉತ್ತಮ ವಾತಾವರಣ ಸೃಷ್ಟಿಸಿತ್ತು.

ಅಧ್ಯಕ್ಷತೆ ವಹಿಸಿದ್ದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮಕ್ಕಳು ಅನಾಥಭಾವ ದೂರವಿಟ್ಟು ರೋಟರಿಯೊಂದಿಗೆ ತಮ್ಮ ಬೇಡಿಕೆ - ಅನಿಸಿಕೆಗಳನ್ನು ಹಂಚಿಕೊಳ್ಳಬಹುದೆಂದರು. ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಮಕ್ಕಳಲ್ಲಿ ಕೀಳರಿಮೆ ದೂರಾಗಿ, ನಾಳಿನ ಸ್ವಪ್ನ ಹೆಚ್ಚಬೇಕೆಂದರು. ಮಾಜಿ ಅಧ್ಯಕ್ಷರಾದ ಎ.ಕೆ. ಜೀವನ್, ರವೀಂದ್ರ ರೈ, ತಿಲಕ್ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯರಂತವರೂ ಕಷ್ಟದಲ್ಲಿದ್ದು ಮೇಲ್ಬಂದು, ಕಹಿ ಅನುಭವದ ಬಳಿಕ ಸಿಹಿ ದೊರೆಯುತ್ತದೆ ಎಂಬ ಭರವಸೆಯ ಮಾತನಾಡಿದರು.

ಕೃಷ್ಣವೇಣಿ ಪ್ರಸಾದ್ ಅವರು ಮನೆಯಲ್ಲೇ ಬೆಳೆದ ಶುಂಠಿ, ಒಂದೆಲಗ, ತುಳಸಿ, ಪುದೀನ ಹಾಗೂ ಅರಿಶಿನದ ಗಿಡಗಳನ್ನು ಪ್ರದರ್ಶಿಸಿ ಅವುಗಳಿಂದ ತಯಾರಿಸಬಹುದಾದ ಮನೆ ಮದ್ದುಗಳನ್ನು ಮನಮುಟ್ಟುವಂತೆ ಹೇಳಿದರು. ನಿಲಯದ ಹಿರಿಯ ಅಧಿಕಾರಿ ಮುಮ್ತಾಜ್ ಮಾತನಾಡಿ, ಮಕ್ಕಳು ಸ್ವಪ್ನ ಕಂಡಷ್ಟು ಯಶಸ್ಸು ಸಾಧ್ಯ ಎಂದು ಹುರಿದುಂಬಿಸಿದರು. ಸದಸ್ಯರಾದ ಶಶಿ ಮೊಣ್ಣಪ್ಪ, ಲೀನಾ ಪೂವಯ್ಯ, ಶಿಲ್ಪಾ ರೈ, ಗಾನ ಪ್ರಶಾಂತ್ ಹಾಗೂ ಇತರರು ಹಾಜರಿದ್ದರು. ಕಾರ್ಯದರ್ಶಿ ಡಾ. ನವೀನ್ ವಂದಿಸಿದರು.