ಮಡಿಕೇರಿ, ಜ. 30: ಸಾರಿಗೆ ಸಂಸ್ಥೆಯ ಬಸ್ ಹರಿದು ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ಮಧ್ಯರಾತ್ರಿ ಇಲ್ಲಿನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಬೆಂಗಳೂರಿನಿಂದ ಸಂಜೆ 7.30ಕ್ಕೆ ನಿಲ್ದಾಣಕ್ಕೆ ಆಗಮಿಸಿದ್ದ ಐರಾವತ ಬಸ್ ನಿಗದಿತ ಸಮಯದಂತೆ ರಾತ್ರಿ 11.16ಕ್ಕೆ ಹೊರಡಬೇಕಿತ್ತು. ಈ ಹಿನ್ನೆಲೆಯಲ್ಲಿ ಬಸ್ ಅನ್ನು ಚಾಲಕ ನಿಲ್ದಾಣದ ಬದಿಯಲ್ಲಿ ನಿಲಿಸಿದ್ದನು. ರಾತ್ರಿ 10.30ರ ವೇಳೆಗೆ ಹೊರಡಲನುವಾದ ಚಾಲಕ ಬಸ್ ಅನ್ನು ಚಾಲನೆ ಮಾಡಿ ಹಿಂದಕ್ಕೆ ತೆಗೆದಿದ್ದಾರೆ. ಈ ಸಂದರ್ಭ ಚಕ್ರಕ್ಕೆ ಏನೋ ಸಿಲುಕಿದ ಅನುಭವವಾದ ಹಿನ್ನೆಲೆಯಲ್ಲಿ ಇಳಿದು ಪರಿಶೀಲಿಸಿದಾಗ ವ್ಯಕ್ತಿಯೋರ್ವ ಚಕ್ರಕ್ಕೆ ಸಿಲುಕಿ ರಕ್ತದ ಮಡುವಿನಲ್ಲಿ ಹೊರಳಾಡುತ್ತಿರುವದು ಗೋಚರಿಸಿದೆ.
ರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೋರ್ವ ನಿಲ್ದಾಣದ ಬದಿಯಲ್ಲಿ ನಿಂತಿದ್ದ ಬಸ್ನ ಕೆಳಗಡೆ ಮಲಗಿದ್ದ. ಬಸ್ ಅನ್ನು ಚಾಲನೆ ಮಾಡುವ ಸಂದರ್ಭ ಬಸ್ನ ಹಿಂಬದಿ ಚಕ್ರ ವ್ಯಕ್ತಿಯ ತಲೆಯ ಮೇಲೆ ಹರಿದು ತಲೆ ಚೂರಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕನ ಗಮನಕ್ಕೆ ಬಾರದ್ದರಿಂದ ಈ ಅನಾಹುತ ಸಂಭವಿಸಿದೆ. ಅಂದಾಜು 45ವರ್ಷ ಪ್ರಾಯದ ವ್ಯಕ್ತಿ ಹಸಿರು ಬಣ್ಣದ ಪ್ಯಾಂಟ್, ನೀಲಿ ಗೆರೆವುಳ್ಳ ಅಂಗಿ, ಬೂದು ಬಣ್ಣದ ಸ್ವೆಟರ್ ಧರಿಸಿದ್ದು, ಕಂಬಳಿ ಹೊದ್ದುಕೊಂಡು ಮಲಗಿದ್ದನು.
ವ್ಯಕ್ತಿಯ ಬಗ್ಗೆ ಯಾವದೇ ಮಾಹಿತಿ ಲಭ್ಯವಾಗದಿದ್ದು, ಬಸ್ನ ಕೆಳಗಡೆ ಮಲಗಲು ಕಾರಣ ಕೂಡ ತಿಳಿದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಅನ್ನು ವಶಪಡಿಸಿಕೊಂಡು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ಅವರು ತಿಳಿಸಿದ್ದಾರೆ. ಮೃತದೇಹವನ್ನು ಶವಾಗಾರದಲ್ಲಿ ಡಲಾಗಿದ್ದು, ವಾರಸುದಾರರಿದ್ದಲ್ಲಿ ಸಂಚಾರಿ ಠಾಣೆಯನ್ನು ಸಂಪರ್ಕಿಸು ವಂತೆ ಅವರು ಕೋರಿದ್ದಾರೆ.