ಶನಿವಾರಸಂತೆ, ಅ. 8: ಕೊಡ್ಲಿಪೇಟೆ ನಗರದಲ್ಲಿ ನಿನ್ನೆ ಸಂಜೆ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಆಗಮಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ವೊಂದನ್ನು ತಡೆದು ಕ್ಷುಲ್ಲಕ ಕಾರಣಕ್ಕಾಗಿ ಬಸ್ಸಿನ ಚಾಲಕನನ್ನು ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣ ಶನಿವಾರಸಂತೆ ಠಾಣೆಯಲ್ಲಿ ದಾಖಲಾಗಿದೆ.

ಖಾಸಗಿ ಬಸ್ ಶನಿವಾರಸಂತೆಯಿಂದ ಅವರೆದಾಳು ರಸ್ತೆಯಲ್ಲಿ ಹೋಗುತ್ತಿರುವಾಗ ದನ ಅಡ್ಡ ಬಂದ ಕಾರಣ ಚಾಲಕ ರಾಘವೇಂದ್ರ ಕೈಯಿಂದ ಸನ್ನೆ ಮಾಡಿ ಬಸ್ಸನ್ನು ಚಾಲನೆ ಮಾಡಿಕೊಂಡು ಕೊಡ್ಲಿಪೇಟೆಗೆ ಸಂಜೆ ತಲಪಿದಾಗ ಕೊಡ್ಲಿಪೇಟೆಯ ನಿವಾಸಿಗಳಾದ ಫಯಾಜ್ ರೆಹಮಾನ್ ಮತ್ತು ಸಂಜು ಎಂಬವರು ಬಸ್ಸನ್ನು ತಡೆದು ನಿಲ್ಲಿಸಿ, ಕಾರಿಗೆ ಅಪಘಾತಪಡಿಸಲು ಬರುತ್ತೀಯ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕಾಏಕಿ ಹಲ್ಲೆ ನಡೆಸಿ ಕಾಲಿನಿಂದ ಒದ್ದು, ಕೊಲೆ ಬೆದರಿಕೆ ಹಾಕಿದ್ದು, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಬ್ಬರು ತಲೆಮರೆಸಿ ಕೊಂಡಿರುತ್ತಾರೆ.