ಗೋಣಿಕೊಪ್ಪಲು, ಆ. 6: ಬೆಂಗಳೂರಿನ ಯಶವಂತಪುರ ವೈ. ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಮುಗಿದ ಯೋಗಿ ನಾರೇಯಣ ಸ್ವಾಮಿಗಳ 181ನೇ ಜಯಂತ್ಯುತ್ಸವ ಮತ್ತು ಬಲಿಜ ವಧೂ-ವರರ ಸಮಾವೇಶದಲ್ಲಿ ‘ಶಕ್ತಿ’ ವರದಿಗಾರ ಹಾಗೂ ಬಲಿಜ ಸಂಘಟನಾ ಸಂಚಾಲಕ ಟಿ.ಎಲ್. ಶ್ರೀನಿವಾಸ್ ಅವರನ್ನು ಶ್ರೀ ಯೋಗಿ ನಾರೇಯಣ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಬಲಿಜ ಜನಾಂಗದ ಪ್ರಮುಖ ಸಿ. ಮುನಿರಾಜು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅರವಿಂದ್ ಮಂಜುನಾಥ್, ಕರ್ನಾಟಕ ರಾಜ್ಯ ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ರಾಮಯ್ಯ, ರಘು ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ರಘು, ಬಲಿಜ ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷ ರಘು, ಕರ್ನಾಟಕ ಸರ್ಕಾರ ನಿವೃತ್ತ ಜಂಟಿ ಕಾರ್ಯದರ್ಶಿ ಕೆ.ಎಸ್. ವೇಣುಗೋಪಾಲ್ ಉಪಸ್ಥಿತಿಯಲ್ಲಿ ಟಿ.ಎಲ್. ಶ್ರೀನಿವಾಸ್ ಅವರನ್ನು ಕೊಡಗು ಜಿಲ್ಲೆಯಲ್ಲಿನ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ರಾಮಯ್ಯ ಅವರು ಮಾತನಾಡಿ, ಬಲಿಜ ಜನಾಂಗಕ್ಕೆ ಮೀಸಲಾತಿ ಅನ್ವಯ ಸಿಗಬೇಕಿದ್ದ 2 ಎ ಸ್ಥಾನಮಾನಕ್ಕಾಗಿ ನ್ಯಾಯಾಲಯದ ಮೂಲಕ ಹೋರಾಟ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಬಲಿಜ ಸಮುದಾಯದ ವಕೀಲರನ್ನು ಸಂಘಟಿಸಲಾಗುತ್ತಿದ್ದು, ಕೊಡಗು ಜಿಲ್ಲೆಯ ಬಲಿಜ ಜನಾಂಗದ ವಕೀಲರನ್ನು ಗುರುತಿಸಿ, ಸಂಘದ ಸದಸ್ಯರನ್ನಾಗಿ ಮಾಡುವ ನಿಟ್ಟಿನಲ್ಲಿ ಟಿ.ಎಲ್. ಶ್ರೀನಿವಾಸ್ ಅವರಿಗೆ ಅಧಿಕಾರ ನೀಡಲಾಗಿದೆ. ಬಲಿಜ ಜನಾಂಗಕ್ಕೆ ಆಗುವ ಅನ್ಯಾಯ, ಅಭಿವೃದ್ಧಿ ಕುರಿತಾದ ಹೋರಾಟಕ್ಕೆ ರಾಜ್ಯ ಬಲಿಜ ವಕೀಲರ ಸಂಘ ಬದ್ಧವಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದ ಬಲಿಜ ಸಮಾಜದ ಸಂಚಾಲಕ ಅರವಿಂದ್ ಮಂಜುನಾಥ್ ಮಾತನಾಡಿ, ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ಬಲಿಜ ಜನಾಂಗವಿದ್ದು, ಒಗ್ಗಟ್ಟಿನ ಕೊರತೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಲಿಷ್ಠ ಬಲಿಜ ಸಮಾಜ ಸಂಘಟಿಸುವ ನಿಟ್ಟಿನಲ್ಲಿ ಕೊಡಗಿನ ಬಲಿಜ ಬಾಂಧವರ ಸಹಕಾರ ಹೊಂದಿಕೊಳ್ಳಲಾಗುವದು. ಕೊಡಗಿನ ಜನತೆ ನೇರ-ನಿಷ್ಠುರವಾದಿಗಳಾಗಿದ್ದು, ದೇಶದ ಸಂರಕ್ಷಣೆಯಲ್ಲಿಯೂ ಕೊಡಗಿನ ಬಲಿಜ ಯುವಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜದ ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನದ ಕುರಿತು ಬೆಂಗಳೂರಿನ ಸಮಾನ ಮನಸ್ಕರು ಅವಲೋಕಿಸುತ್ತಿರುವದಾಗಿ, ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಜರುಗುವ ಬಲಿಜ ಸಮಾಜದ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಉದ್ಯಮಿಗಳು, ಹಿತೈಷಿಗಳು ಅಧಿಕವಾಗಿ ಪಾಲ್ಗೊಳ್ಳಲಿದ್ದಾರೆ ಮತ್ತು ಕೊಡಗಿನ ಬಲಿಜ ಸಮುದಾಯದ ಅಭಿವೃದ್ಧಿಗೆ ಪೂರಕ ಸಹಕಾರ ನೀಡಲಾಗುವದು ಎಂದು ಹೇಳಿದರು. ವಧೂ-ವರರ ಸಮಾವೇಶದ ಬಳಿಕ ಕಾರ್ಯಕ್ರಮ ಸಂಘಟಕ ಅರವಿಂದ್ ಮಂಜುನಾಥ್ ಅವರನ್ನೂ ಸಮಾಜ ಬಾಂಧವರು ಸನ್ಮಾನಿಸಿ, ಶುಭ ಹಾರೈಸಿದರು.