ಮಡಿಕೇರಿ, ಜು. 6: ಭಾರತೀಯ ಅಂಚೆ ಇಲಾಖೆ ನೂತನ ಪ್ರಯೋಗಕ್ಕೆ ಮುಂದಾಗಿದೆ. ಭಾರತೀಯ ಅಂಚೆ ಪಾವತಿ ಬ್ಯಾಂಕ್ ಹೆಸರಿನಲ್ಲಿ ಸ್ವಂತ ಬ್ಯಾಂಕೊಂದನ್ನು ಸ್ಥಾಪಿಸುವ ಸಾಹಸಕ್ಕೆ ಅಂಚೆ ಇಲಾಖೆ ಅಣಿಯಾಗಿದ್ದು, ಈ ಬಗ್ಗೆ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಕೇಂದ್ರ ಕಚೇರಿಯಿಂದ ಕೊಡಗು ಜಿಲ್ಲೆಯ ಪ್ರಧಾನ ಅಂಚೆ ಕಚೇರಿಗೆ ಆದೇಶ ಬಂದಿದ್ದು, ಬ್ಯಾಂಕ್ ಸ್ಥಾಪನೆ ಸಂಬಂಧ ಪೂರ್ವ ತಯಾರಿಗೆ ಸೂಚಿಸಲಾಗಿದೆ.

ಕೇಂದ್ರ ಸರಕಾರದಿಂದ ಬಂದಿರುವ ಆದೇಶದನ್ವಯ ಸುಮಾರು 800 ಕೋಟಿ ರೂಪಾಯಿ ಗಳನ್ನು ಬ್ಯಾಂಕ್ ವ್ಯವಸ್ಥೆಗಾಗಿ ಹೂಡಿಕೆ ಮಾಡಲಾಗುತ್ತಿದೆ. ಭಾರತದಲ್ಲಿ 650 ಶಾಖೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾ ಕೇಂದ್ರಗಳಲ್ಲಿ ಈ ಬ್ಯಾಂಕ್ ಕಾರ್ಯೋನ್ಮುಖ ವಾಗಲಿದ್ದು, ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾಗಲಿದೆ. ಪ್ರಧಾನ ಅಂಚೆ ಕಚೇರಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಉಪ ಶಾಖೆಗಳ ಮೂಲಕ ಗ್ರಾಹಕರಿಗೆ ಸೇವೆ ಲಭ್ಯವಾಗಲಿದೆ.

ಭಾರತದಲ್ಲಿನ ಪ್ರತಿಯೊಬ್ಬರು ಅವರು ಏನೇ ಆಗಿರಲಿ, ಎಷ್ಟೇ ಸಂಪಾದಿಸುತ್ತಿರಲಿ, ಎಲ್ಲೇ ವಾಸಿಸುತ್ತಿರಲಿ ಅವರುಗಳಿಗೆ ಆರ್ಥಿಕ ಸೇವೆಗಳನ್ನು ಸಮಾನವಾಗಿ ಒದಗಿಸುವ ಮೂಲಕ ಆರ್ಥಿಕ ಸೇರ್ಪಡೆಯನ್ನು ವೃದ್ಧಿಪಡಿಸುವ ಏಕೈಕ ಉದ್ದೇಶದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸ್ಥಾಪನೆಗೆ ಅಂಚೆ ಇಲಾಖೆ ಮುಂದಾಗಿದೆ. ಬ್ಯಾಂಕ್‍ಗಳಿಲ್ಲದ; ಬ್ಯಾಂಕ್‍ಗಳ ಕೊರತೆ ಇರುವ ಸಮಾಜದ ಎಲ್ಲಾ ವರ್ಗಗಳಿಗೂ ಮೂಲ ಬ್ಯಾಂಕಿಂಗ್ ಸೌಲಭ್ಯ ತಲಪಿಸುವದು ಕೂಡ ಅಂಚೆ ಇಲಾಖೆಯ ಗುರಿಯಾಗಿದೆ.

ಫಲಾನುಭವಿಗಳಿಗೆ ನೇರ ವರ್ಗಾವಣೆಯ ಪ್ರಯೋಜನದ ಮೂಲಕ ನರೇಗ ವೇತನ, ಪಿಂಚಣಿ ವೇತನ ಮತ್ತು ವಿದ್ಯಾರ್ಥಿ ವೇತನಗಳನ್ನು ಈ ಬ್ಯಾಂಕಿಂಗ್ ವ್ಯವಸ್ಥೆಯ ಮುಖಾಂತರ ಪಡೆಯಬಹುದಾಗಿದೆ. ಉಪಯುಕ್ತ ಬಿಲ್‍ಗಳ ಪಾವತಿಯನ್ನು ಮಾಡಬಹುದು. ತ್ವರಿತವಾಗಿ ಕಡಿಮೆ ಖರ್ಚಿನಲ್ಲಿ ಹಣದ ರವಾನೆ ಸ್ವೀಕರಿಸಬಹುದು. ಇಷ್ಟೇ ಅಲ್ಲದೇ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಮೂಲಕ ಪ್ರಮುಖ ಬ್ಯಾಂಕ್‍ಗಳಿಂದ ಸಾಲ ಮತ್ತು ವಿಮಾ ಕಂಪೆನಿಗಳಿಂದ ವಿಮೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಫಲಾನುಭವಿಗಳು ಎಲ್ಲೇ ಇದ್ದರೂ ಹಣಕಾಸಿನ ಅವಕಾಶ ಪಡೆಯುವದನ್ನು ಅದು ಖಾತರಿಪಡಿಸುತ್ತದೆ.

ಭಾರತೀಯ ಅಂಚೆ ಕಚೇರಿಯು ಭಾರತದಲ್ಲಿ 1.54 ಲಕ್ಷ ಅಂಚೆ ಕಚೇರಿಗಳನ್ನು

ಹೊಂದಿದ್ದು, ಅವುಗಳ ಪೈಕಿ ಶೇ. 90 ರಷ್ಟು ಅಂಚೆ ಕಚೇರಿಗಳು ಗ್ರಾಮೀಣ ಭಾಗಗಳಲ್ಲಿವೆ. ಸ್ಥಳೀಯ ಮತ್ತು ವಿಶ್ವಾಸಾರ್ಹ ಅಂಚೆ ಪೇದೆಗಳು ಮತ್ತು ಗ್ರಾಮೀಣ ಅಂಚೆ ಸಹಾಯಕರ ಸಹಕಾರದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕ್ ತನ್ನ ಸೇವೆಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುವಂತೆ ಮಾಡಲಿದೆ.

ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ) ಉಳಿತಾಯ ಖಾತೆ, ಚಾಲ್ತಿ ಖಾತೆ, ಪಾವತಿ ಮತ್ತು ರವಾನೆ ಮುಂತಾದ ಸಾಧ್ಯವಿರುವ ಮತ್ತು ಎಲ್ಲಾ ಸರಳ ಸೇವೆಗಳನ್ನು ನಾಗರಿಕರಿಗೆ ನೀಡಲಿದೆ. ವಿಮೆ, ಮ್ಯೂಚುವÀಲ್ ಫಂಡ್, ಸಾಲ ಇತ್ಯಾದಿಗಳಿಗೆ ಸಂಪರ್ಕ ಕಲ್ಪಿಸಲಿದೆ.

ಅಂಚೆ ಸೇವಕನ ಪಾತ್ರ

* ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವದು

* ಐಪಿಪಿಬಿ ಕುರಿತಾದ ಮಾಹಿತಿಯನ್ನು ಪ್ರಚಾರಪಡಿಸುವದು

* ಮೂರನೇ ಪಾರ್ಟಿಯ ಹಣಕಾಸು ಉತ್ಪನ್ನಗಳನ್ನು ವಿತರಿಸುವದು

* ಆರ್ಥಿಕ ಒಳಗೊಳ್ಳುವಿಕೆಯನ್ನು ವರ್ಧಿಸಲು ಸಹಾಯ ಮಾಡುವದು

* ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯಾಗಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವದು. ಐಪಿಪಿಬಿ ತಾನು ಗಳಿಸುವ ಶುಲ್ಕದಲ್ಲಿನ ಒಂದು ಭಾಗವನ್ನು ಇಲಾಖೆ ಮತ್ತು ಅಂಚೆ ಸೇವಕರ ಜೊತೆ ಹಂಚಿಕೊಳ್ಳುತ್ತದೆ.

* ಐಪಿಪಿಬಿಯು ಎಟಿಎಂ, ಟ್ಯಾಬ್ಲೆಟ್ ಇತ್ಯಾದಿಗಳ ಹೊರತಾಗಿ, ಮುಂಬರುವ ಮೈಕ್ರೋ ಎಟಿಎಂ ಮತ್ತು ಮೊಬೈಲ್ ಆಧಾರಿತ ಉಪಕರಣಗಳನ್ನು ಬಳಸುತ್ತವೆ. ಇಲಾಖೆಯು ಈ ನಿಟ್ಟಿನಲ್ಲಿ ಸಿಬ್ಬಂದಿಗೆ ಅಗತ್ಯವಾದ ತರಬೇತಿ ಮತ್ತು ಕೌಶಲ್ಯ ನೀಡುವಲ್ಲಿ ಸಜ್ಜಾಗುತ್ತಿದೆ.

* ಅಂಚೆ ಕಚೇರಿ, ಪೋಸ್ಟ್ ಮ್ಯಾನ್, ಜಿಡಿಎಸ್, ಎಟಿಎಂ, ಇಂಟರ್‍ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮುಖಾಂತರ ಐಪಿಪಿಬಿ ಕಾರ್ಯೋನ್ಮುಖವಾಗಲಿದೆ.