ಆಲೂರು-ಸಿದ್ದಾಪುರ, ನ. 12: ಪ್ರಸಕ್ತ ವರ್ಷ ಇಡೀ ಜಿಲ್ಲೆ ಬರಗಾಲಕ್ಕೆ ತುತ್ತಾಗಿದ್ದು, ಜಿಲ್ಲೆಯ ರೈತಾಪಿ ಜನರು ಕಂಗಾಲಾಗಿದ್ದಾರೆ. ಈ ವರ್ಷ ಬರಗಾಲದ ಬಗ್ಗೆ ಕಲ್ಪನೆಯೂ ಇಲ್ಲದ ಕೊಡಗು ಜಿಲ್ಲೆಯೂ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಜಿಲ್ಲೆಯಲ್ಲಿ ಸರಾಸರಿ ಮಳೆ ಪ್ರಮಾಣ ಶೇ. 60 ರಷ್ಟು ಕುಸಿದು ಹೋಗಿರುವದರಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಪೈಕಿ ಸೋಮವಾರಪೇಟೆ ತಾಲೂಕನ್ನು ಹೊರತುಪಡಿಸಿದಂತೆ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಆದರೆ ವಾಸ್ತವಾಂಶವೇ ಬೇರೆಯಾಗಿದ್ದು, ಸೋಮವಾರ ಪೇಟೆ ತಾಲೂಕಿನಾದ್ಯಂತ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಇಲ್ಲಿ ಮಳೆ ಪ್ರಮಾಣ ಕಳೆದ ವರ್ಷಕ್ಕಿಂತ ಸರಾಸರಿ ಶೇ. 70 ರಷ್ಟು ಕುಸಿದು ಹೋಗಿದೆ. ತಾಲೂಕಿನಲ್ಲಿರುವ ಕಾಫಿ ತೋಟಗಳು ನೋಡಲು ಹಸಿರಿನಿಂದ ಕಾಣುತ್ತಿದ್ದರೂ ಮಳೆ ಪ್ರಮಾಣ ಕಡಿಮೆಯಾಗಿರುವದರಿಂದ ಕಾಫಿ ಬೆಳೆಗೆ ಹೊಡೆತ ಬಿದ್ದಿದೆ. ನೀರಾವರಿ ಮತ್ತು ಮಳೆಯಾಶ್ರಿತ ಗದ್ದೆಗಳ ಸಾಲಿನಲ್ಲಿ ರೈತರು ನಾಟಿ ಮಾಡಿದ್ದ ಭತ್ತದ ಕೃಷಿಗೆ ನೀರಿಲ್ಲದೆ ಒಣಗಿ ಹೋಗುತ್ತಿದೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ದುಂಡಳ್ಳಿ, ಶನಿವಾರಸಂತೆ, ನಿಡ್ತ, ಗೌಡಳ್ಳಿ, ಆಲೂರು-ಸಿದ್ದಾಪುರ ಗ್ರಾ.ಪಂ.ಗಳನ್ನು ಒಳಗೊಂಡಿದ್ದು, ಹೋಬಳಿಯಲ್ಲಿ ಒಟ್ಟು 2 ಸಾವಿರ ಹೆಕ್ಟೇರ್‍ನಲ್ಲಿ ಭತ್ತವನ್ನು ಬೆಳೆಯುವ ಪ್ರದೇಶ ಎಂದು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಗುರುತಿಸಿದೆ. ಈ ಭಾಗದ ರೈತರು ಮಳೆಯನ್ನು ನಂಬಿ ಹಾಗೂ ಬದಲಿ ನೀರಾವರಿ ವ್ಯವಸ್ಥೆಯಲ್ಲಿ ತಮ್ಮ ಗದ್ದೆಗಳಲ್ಲಿ ವಿವಿಧ ತಳಿಗಳ ಭತ್ತವನ್ನು ಬೆಳೆಯುವದು ವಾಡಿಕೆ. ಪ್ರಸ್ತುತ ವರ್ಷ ಹೋಬಳಿಯ ಕೆಲವು ಪ್ರದೇಶಗಳಲ್ಲಿ ರೈತರು ಭತ್ತದ ಕೃಷಿಗೆ ಆಸಕ್ತಿ ತೋರದೆ ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಶುಂಠಿ, ಬಾಳೆ ಮುಂತಾದ ಅಲ್ಪಾವಧಿ ಬೆಳೆಗಳನ್ನು ಬೆಳೆದಿದ್ದಾರೆ. ಅದರಂತೆ ಶನಿವಾರಸಂತೆ ಹೋಬಳಿಯಲ್ಲಿ ಈ ವರ್ಷ ಒಟ್ಟು 1550 ಹೆಕ್ಟೇರ್‍ನಲ್ಲಿ ರೈತರು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಲ್ಪಸ್ವಲ್ಪ ಮಳೆಯಾದ ಸಂದರ್ಭದಲ್ಲಿ ಭತ್ತದ ನಾಟಿಯನ್ನು ಮಾಡಿ ಮುಗಿಸಿದ್ದಾರೆ. ಇದರಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯೊಂದರಲ್ಲೇ 60 ಹೆಕ್ಟೇರ್ ಪ್ರದೇಶದಲ್ಲಿ ನಾಟಿಯನ್ನೇ ಮಾಡಿಲ್ಲ. ಹೋಬಳಿಯಲ್ಲಿ ಒಟ್ಟು 500 ಹೆಕ್ಟೇರ್‍ನಲ್ಲಿ ರೈತರು ಭತ್ತದ ನಾಟಿ ಮಾಡಿಲ್ಲ. ಇನ್ನು ಉಳಿದಂತೆ 1550 ಹೆಕ್ಟೇರ್‍ನಲ್ಲಿ ರೈತರು ನಾಟಿ ಮಾಡಿ ಮುಗಿಸಿದ್ದಾರೆ. ಆದರೆ ರೈತರು ನಾಟಿ ಮಾಡಿದ ಮೇಲೆ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ. ಗದ್ದೆಗಳಲ್ಲಿ ನೀರು ಇಲ್ಲದೆ, ಇತ್ತ ಮಳೆಯೂ ಇಲ್ಲದೆ ಗದ್ದೆಗಳಲ್ಲಿ ನಾಟಿ ಮಾಡಿದ್ದ ಪೈರುಗಳು ಮಂಕಾಗಿವೆ. ಗದ್ದೆಗಳಲ್ಲಿ ಭತ್ತದ ಪೈರುಗಳು ನೋಡಲು ಹಸಿರಿನಿಂದ ಕಾಣುತ್ತಿದ್ದರೂ ಗದ್ದೆಯಲ್ಲಿ ನೀರಿಲ್ಲದೆ ಗದ್ದೆ ಬಿರುಕು ಬಿಟ್ಟಿದೆ, ಈಗಾಗಲೇ ರೈತರು ನಾಟಿ ಮಾಡಿ 3 ತಿಂಗಳು ಕಳೆದಿದೆ.

ಈ ಅವಧಿಯಲ್ಲಿ ಗದ್ದೆಗಳಲ್ಲಿ 2 ಇಂಚಿನಷ್ಟು ನೀರು ಇರಬೇಕಾಗುತ್ತದೆ. ಈ ಅವಧಿಯಲ್ಲಿ ಪೈರುಗಳಲ್ಲಿ ಕದಿರು ಕಾಣಿಸಿಕೊಳ್ಳುವ ಸಮಯ ಪೈರುಗಳು ಗರ್ಭಾ ವ್ಯವಸ್ಥೆಯಲ್ಲಿರುವದರಿಂದ ಪೈರುಗಳಿಗೆ ನೀರಿನ ಅಗತ್ಯವಿರುತ್ತದೆ ಹಾಗೂ ಮಳೆ ಬೀಳುವ ಅವಶ್ಯವಿರುತ್ತದೆ. ಆದರೆ ಗದ್ದೆಗಳಲ್ಲಿ ಒಂದು ಹನಿಯೂ ನೀರಿಲ್ಲದಿರುವದು ಮತ್ತು ಇಲ್ಲಿಯ ತನಕ ಮಳೆಯಾಗದಿರುವದರಿಂದ ಭತ್ತದ ಪೈರುಗಳು ಸುರುಟಿ ಹೋಗಿವೆ. ಬೋರ್‍ವೆಲ್ ಸೌಕರ್ಯ ಹೊಂದಿರುವ ಕೆಲವು ರೈತರು ಗದ್ದೆಗೆ ನೀರು ಹಾಯಿಸಿದ್ದರೂ ಸಹ ಒಂದೆರಡು ಗಂಟೆಗಳಲ್ಲಿ ನೀರು ಇಂಗಿ ಹೋಗುತ್ತಿದೆ. ಇನ್ನು ಕೆಲವು ರೈತರು ಸ್ಪ್ರಿಂಕ್ಲರ್ ಮೂಲಕ ನೀರನ್ನು ಹಾಯಿಸುತ್ತಿದ್ದಾರೆ. ಇನ್ನು 1 ವಾರದಲ್ಲಿ ಮಳೆಯಾಗದೆ ಹೋದಲ್ಲಿ ಹೋಬಳಿಯಾದ್ಯಂತ ರೈತರು ನಾಟಿ ಮಾಡಿದ್ದ ಭತ್ತದ ಪೈರುಗಳು ಸಂಪೂರ್ಣವಾಗಿ ಸುಟ್ಟು ಹೋಗುವ ಸಾಧ್ಯತೆಯಿದೆ.

‘ಹಲವಾರು ವರ್ಷಗಳಿಂದ ಗದ್ದೆಯಲ್ಲಿ ಭತ್ತವನ್ನು ಬೆಳೆಯುತ್ತೇನೆ. ಈ ವರ್ಷವೂ ಭತ್ತದ ನಾಟಿ ಮಾಡಿರುತ್ತೇನೆ.

ಆದರೆ ನಾಟಿ ಮಾಡಿದ ಮೇಲೆ ಮಳೆ ಕೈಕೊಟ್ಟಿರುವದರಿಂದ ನೀರಾವರಿ ಸೌಕರ್ಯವಿರುವ ತÀನ್ನ ಗದ್ದೆಗಳಲ್ಲಿ ನೀರಿಲ್ಲದೆ ಬಿರುಕು ಬಿಟ್ಟಿದೆ. ಭತ್ತದ ಪೈರುಗಳು ಸುಟ್ಟು ಹೋಗುತ್ತಿದೆ, ಒಂದು ವೇಳೆ ಈಗ ಮಳೆ ಬಿದ್ದರೂ ಸಹ ಭತ್ತದ ಬೆಳೆಗೆ ಪ್ರಯೋಜನವಾಗದು’ ಎಂದು ಶನಿವಾರಸಂತೆಯ ರೈತ ಚಂದ್ರಪ್ಪ ಹೇಳುತ್ತಾರೆ

ಶನಿವಾರಸಂತೆ ಹೋಬಳಿಯಲ್ಲಿ ಈ ವರ್ಷ 1550 ಹೆಕ್ಟರ್‍ನಲ್ಲಿ ರೈತರು ಭತ್ತದ ನಾಟಿಯನ್ನು ಮಾಡಿದ್ದರು. ಕೃಷಿ ಸಂಪರ್ಕ ಕೇಂದ್ರದಿಂದ ರೈತರು ಬಿತ್ತನೆ ಬೀಜ ಖರೀದಿಸಿದ್ದರು. ಅದೇ ಪ್ರಕಾರವಾಗಿ ಮಳೆಯಾದ ಸಂದರ್ಭದಲ್ಲಿ ರೈತರು ನಾಟಿಯನ್ನು ಕೂಡ ಮಾಡಿದ್ದರು. ಆದರೆ ಕಳೆದ 3 ತಿಂಗಳಿನಿಂದ ಮಳೆಯಾಗದ ಕಾರಣದಿಂದ ಭತ್ತದ ಕೃಷಿ ಗದ್ದೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭತ್ತದ ಪೈರು ಗರ್ಭಕಟ್ಟುವ ಸಮಯದಲ್ಲಿ ನೀರಿನ ಅವಶ್ಯವಿರುತ್ತದೆ. ಆದರೆ ಗದ್ದೆಗಳಲ್ಲಿ ನೀರು ಇಲ್ಲದೆ ಮಳೆಯೂ ಇಲ್ಲದಿರುವದರಿಂದ ಪೈರುಗಳು ಸುಟ್ಟು ಹೋಗುವ ಸಾಧ್ಯತೆಯಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಇನ್ನು 1 ವಾರದೊಳಗೆ ಮಳೆಯಾದಲ್ಲಿ ಮಾತ್ರ ಶೇ. 50 ರಷ್ಟು ಬೆಳೆಯನ್ನು ಕಾಪಾಡಿಕೊಳ್ಳಬಹುದು.

ಹೋಬಳಿಯಾದ್ಯಂತ ಭತ್ತದ ಕೃಷಿಗೆ ತೊಂದರೆಯಾಗಿರುವದರ ಕುರಿತು ಕೃಷಿ ಸಂಪರ್ಕ ಕೇಂದ್ರದಿಂದ ಸರಕಾರಕ್ಕೆ ಈಗಿನ ವಾಸ್ತವಾಂಶದ ವರದಿಯನ್ನು ನೀಡಲಾಗುವದೆಂದು ಶನಿವಾರಸಂತೆ ಕೃಷಿ ಸಂಪರ್ಕ ಕೇಂದ್ರ, ಕೃಷಿ ಅಧಿಕಾರಿ ಮಂಜುನಾಥ್ ಹೇಳಿದರು.

- ದಿನೇಶ್ ಮಾಲಂಬಿ