ಮಡಿಕೇರಿ, ಜ. 5: ಕೊಡಗಿನಲ್ಲಿ ಬರ ಹಿನ್ನೆಲೆ ಸರ್ಕಾರದಿಂದ ನೆರವು ಕೋರುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.
ಸುದರ್ಶನ ಅತಿಥಿ ಗೃಹದಲ್ಲಿಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯರನ್ನೊಳಗೊಂಡು ಸಭೆ ನಡೆಸಿ ಈ ಬಗ್ಗೆ ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಕ್ಷೇತ್ರಕ್ಕೆ ತಲಾ ಒಂದೊಂದು ಕೋಟಿ ಅನುದಾನ ಕೋರಲು ತೀರ್ಮಾನಿಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಹರೀಶ್ ಅವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜಿಲ್ಲೆಯ ಎಲ್ಲಾ ಇಲಾಖೆಗಳ ವರದಿಯನ್ನು ಕ್ರೋಢಿಕರಿಸಿ ನಿಯೋಗ ತೆರಳ ಲಾಗುವದು. ತಾ. 10 ರಂದು ಉಸ್ತುವಾರಿ ಸಚಿವರು ಕೊಡಗಿಗೆ ಆಗಮಿಸಲಿದ್ದು, ಈ ಸಂದರ್ಭ ಅವರೊಂದಿಗೆ ಮಾತನಾಡಿ ಸಿಎಂ ಭೇಟಿಗೆ ದಿನ ನಿಗದಿ ಮಾಡಿ ಜಿಲ್ಲೆಯ ಶಾಸಕರು, ಸಂಸದರನ್ನು ಒಳಗೊಂಡು ನಿಯೋಗ ತೆರಳಲಾಗುವದು ಎಂದರು.