ಕುಶಾಲನಗರ, ಅ. 15: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳ ಬಳಿ ನಿಯೋಗ ತೆರಳಿ ಚರ್ಚಿಸಲು ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಪ್ರಮುಖವಾಗಿ ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ, ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ಶತಾಬ್ಧಿ ಕಾರ್ಯಕ್ರಮ, ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕುಟ್ಟಪ್ಪ ಹುತಾತ್ಮ ದಿನಾಚರಣೆ, ನೂತನ ಕಾಫಿ ಕಾಯ್ದೆಗಳ ಬಗ್ಗೆ ಚರ್ಚೆಗಳು ನಡೆಯಿತು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಿದರು. ಶಾಸಕ ಕೆ.ಜಿ.ಬೋಪಯ್ಯ ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿದರು, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಪಕ್ಷ ಸಂಘಟನೆಯ ಕುರಿತಾಗಿ ಮಾಹಿತಿಗಳನ್ನು ಸಭೆಯಲ್ಲಿ ಒದಗಿಸಿದರು ಎಂದು ಅವರು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಯಾವದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಅಧಃಪತನದ ಹಾದಿ ಹಿಡಿದಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿ ಕೊಂಡು ಹೋಗುತ್ತಿದ್ದಾರೆಯೇ ಹೊರತು ನೂತನ ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ನೂತನ ಕಾಫಿ ಕಾಯ್ದೆ ರಚನೆ ಯಿಂದಾಗಿ ಕಾಫಿ ಬೆಳೆಗಾರರಿಗೆ ಅನುಕೂಲ ಉಂಟಾಗಿದ್ದು, ಏನಾದರೂ ಲೋಪದೋಷವಿದ್ದÀಲ್ಲಿ ನಮ್ಮ ಸಂಸದರು ಹಾಗೂ ಶಾಸಕರು ಚರ್ಚಿಸಿ ಕೇಂದ್ರದ ಗಮನಕ್ಕೆ ತರಲಿದ್ದಾರೆ ಎಂದ ಮನು ಮುತ್ತಪ್ಪ, ಈ ಬಗ್ಗೆ ಕಾಂಗ್ರೆಸ್ ವಿನಾಃಕಾರಣ ಗೊಂದಲ ಸೃಷ್ಟಿಸುವದನ್ನು ನಿಲ್ಲಿಸಬೇಕಿದೆ ಎಂದರು.

ಕರ್ನಾಟಕದಲ್ಲಿ 1 ಕೋಟಿ, ಕೊಡಗಿನಲ್ಲಿ 45 ಸಾವಿರ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಸಂವಿಧಾನದಂತೆ ಸದಸ್ಯತ್ವ ಅಭಿಯಾನದ ನಂತರ ಪಕ್ಷದ ಚೌಕಟ್ಟಿ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ, ಜಿಲ್ಲಾ ಕಾರ್ಯಕಾರಿಣಿ, ತಾಲೂಕು ಕಾರ್ಯಕಾರಿಣಿ ಸಭೆಗಳು ಪ್ರತೀ 3 ತಿಂಗಳಿಗೊಮ್ಮೆ ನಡೆಸುವ ಮೂಲಕ ಪಕ್ಷದ ಸಾಧನೆ, ಸಿದ್ಧಾಂತಗಳು, ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಲಾಗುವದು.

ಭಾರತ ಜನಸಂಘದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ಬಾರಿ ಯಾವದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಬಾರದು. ಇದಕ್ಕೆ ವಿರೋಧ ವ್ಯಕ್ತಪಡಿಸುವದರೊಂದಿಗೆ ಕಳೆದ ಬಾರಿ ಟಿಪ್ಪು ಜಯಂತಿ ಸಂದರ್ಭ ಹತ್ಯೆಗೊಳಗಾದ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಅವರ ಹುತಾತ್ಮ ದಿನಾಚರಣೆಯನ್ನು ಸಂಘ ಪರಿವಾರ ಆಚರಿಸಲಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯ ಅವರು ಪಾಕಿಸ್ತಾನದ ಪರವಾಗಿ ಮಾತನಾಡಿ ರುವದು ನಿಜಕ್ಕೂ ಖಂಡನೀಯ ವಿಚಾರವಾಗಿದೆ. ಪಾಕಿಸ್ತಾನದ ಪರವಾಗಿ ಮಾತನಾಡುವವರು ಪಾಕಿಸ್ತಾನದಲ್ಲೇ ನೆಲೆಸಲಿ ಎಂದರು. ದೇಶದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಬೇಕಿದೆ. ರಾಹುಲ್ ಗಾಂಧಿಯೊಂದಿಗಿನ ರಮ್ಯಾರ ಒಡನಾಟದ ಕಾರಣ ಕಾಂಗ್ರೆಸ್ ಮುಖಂಡರು ಅವರನ್ನು ಹಿಡಿತ ದಲ್ಲಿಟ್ಟುಕೊಳ್ಳಲು ಹಿಂಜರಿಯುತ್ತಿರು ವದು ಹಾಸ್ಯಾಸ್ಪದವಾಗಿದೆ ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್.ಮಂಜುಳಾ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ಸತೀಶ್, ಬಾಲಚಂದ್ರ ಕಳಗಿ, ವಿ.ಕೆ.ಲೋಕೇಶ್, ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಪಕ್ಷದ ಮಾಜಿ ಜಿಲ್ಲಾಧÀ್ಯಕ್ಷ ಬಿ.ಡಿ.ಮಂಜುನಾಥ್ ಮತ್ತು ಸ್ಥಳೀಯ ಪ್ರಮುಖರು ಇದ್ದರು.