ಗೋಣಿಕೊಪ್ಪಲು, ನ. 8: ಬರ ನಿರ್ವಹಣೆ, ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ಹಾಗೂ ರೈತರ ಸಾಲಮನ್ನಾಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಲು ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಲು ಒತ್ತಾಯಿಸಿ ಹೋರಾಟ ನಡೆಸಲಾಗು ವದು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಅಥವಾ ಬೆಳಗಾವಿಯಲ್ಲಿ ರೈತರು ಹಾಗೂ ಕೃಷಿ ಅವಲಂಭಿತ ಶ್ರಮಿಕರು ಸೇರಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವದು ಎಂದರು.

ಕೊಡಗು ಜಿಲ್ಲೆಯಲ್ಲಿ ಕೆರೆಗಳಿಂದ ಕೃಷಿಗೆ ನೀರು ಬಳಕೆ ಮಾಡದಂತೆ ಕಂದಾಯ ಇಲಾಖೆ ಹೇಳಿಕೆ ನೀಡುವ ಮೂಲಕ ರೈತನ ಪರಿಸರ ಕಾಳಜಿಗೆ ಧಕ್ಕೆ ಉಂಟು ಮಾಡುತ್ತಿದೆ. ಕೃಷಿಗೆ ನೀರು ಬಳಸುವ ಮೂಲಕ ನೀರು ಹಿಂಗಿ ಇನ್ನಷ್ಟು ಅಂತರ್ಜಲ ಕಾಪಾಡಲು ಸಾಧ್ಯವಾಗಲಿದೆ. ಇಲಾಖೆಯ ಇಂತಹ ನಿರ್ಧಾರಗಳನ್ನು ರೈತ ಸಂಘ ಖಂಡಿಸುತ್ತದೆ. ಜಿಲ್ಲಾಧಿಕಾರಿ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದರು.

ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ಸಮಾವೇಶದಲ್ಲಿ ಪ್ರಮುಖ 12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವದು. ಬರ, ಪರಿಹಾರ ಅಥವಾ ನೀರಿಲ್ಲದೆ ನಷ್ಟ ಅನುಭವಿಸಿದ ರೈತನಿಗೆ ವೈಜ್ಞಾನಿಕ ಪರಿಹಾರ ನೀಡುವದು. ಭತ್ತ, ಕಾಫಿ, ರಾಗಿ, ಕಬ್ಬು ರೇಷ್ಮೆಯಂತಹ ಬೆಳೆಯ ಜೊತೆಗೆ ತೆಂಗು, ಅಡಿಕೆಗೂ ಏಕರೆಗೆ ರೂ. 50 ಸಾವಿರ ಪರಿಹಾರ ನೀಡುವದು.

ಕೃಷಿ ಕಾರ್ಮಿಕರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಎಲ್ಲಾ ತರಹದ ಸಾಲ ಮನ್ನಾ ಮಾಡುವದು. ಮುಂಗಾರು ಕೃಷಿಗೆ ಬಡ್ಡಿ ರಹಿತ ಸಾಲ ಹಾಗೂ ದೀರ್ಘಾವಧಿ ಸಾಲ ನೀಡುವದು. ಸಾಲ ಬಾಧೆಯಿಂದ ಸಾವನ್ನಪ್ಪಿದ ಕುಟುಂಬಕ್ಕೆ 30 ದಿನಗಳ ಒಳಗೆ ಪರಿಹಾರ ನೀಡುವದು. ದನ, ಕರುಗಳಿಗೆ ಮೇವು, ನೀರು ಪೂರೈಸಲು ಕ್ರಮ ಕೈಗೊಳ್ಳುವದು, ಭತ್ತ ಕೃಷಿಕರಿಗೆ ರೂ. 15 ಸಾವಿರ ಸಹಾಯ ಧನ ನೀಡುವದು, ಅರಣ್ಯ ನಾಶದಿಂದಾಗುತ್ತಿರುವ ಮಳೆ ಪ್ರಮಾಣ ಕುಗ್ಗದಂತೆ ಮಾಡಲು ಚೆಕ್ ಪೋಸ್ಟ್‍ಗಳನ್ನು ಇನ್ನಷ್ಟು ಬಲಪಡಿಸುವದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕರುಗಳಾದ ಚಿಮ್ಮಂಗಡ ಗಣೇಶ್ ಹಾಗೂ ಮಚ್ಚಮಾಡ ರಂಜಿ ಉಪಸ್ಥಿತರಿದ್ದರು.