ಮಡಿಕೇರಿ, ಆ. 26: ಜಿಲ್ಲೆಯಲ್ಲಿ ಬಡವರಿಗೆ 94 ಸಿ ಯಡಿ ನಿವೇಶನ ಒದಗಿಸುವ ನಿಟ್ಟಿನಲ್ಲಿ ತಹಶೀಲ್ದಾರ ರುಗಳು ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತರಾಂ ಸೂಚನೆ ನೀಡಿದರು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಡಿಕೇರಿ ತಾಲೂಕಿನಲ್ಲಿ 1726, ಸೋಮವಾರ ಪೇಟೆ ತಾಲೂಕಿನಲ್ಲಿ 1393 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 10238 ಅರ್ಜಿಗಳು 94 ಸಿ ಯಡಿ ಫಲಾನು ಭವಿಗಳು ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಮೂರು ತಾಲೂಕಿನ ತಹಶೀಲ್ದಾರರುಗಳು ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಸಚಿವರು ಶೀಘ್ರ ಫಲಾನು ಭವಿಗಳಿಗೆ ನಿವೇಶನ ಒದಗಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಬಗ್ಗೆ ದಿನನಿತ್ಯ ವರದಿ ಕೇಳಿಬರುತ್ತಿವೆ. ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೂರು ವಲಯ ಅರಣ್ಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ವಸತಿ ಯೋಜನೆಗಳು ಮತ್ತು ಸರ್ಕಾರಿ ಕಟ್ಟಡಗಳಿಗೆ

ಮರಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ನೂತನ ಮರಳು ನೀತಿಯಂತೆ ಸ್ಥಳೀಯರಿಗೆ ಮರಳು ಪೂರೈಕೆ ಮಾಡಬೇಕು. ಲೋಕೋಪಯೋಗಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿಯಾಗಿ ಮರಳು ಪೂರೈಕೆಗೆ ಕ್ರಮವಹಿಸಬೇಕು. ಜನರಲ್ ತಿಮ್ಮಯ್ಯ ಸ್ಮಾರಕ ಭವನ ಸುತ್ತಲಿನ ಜಾಗವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ತುರ್ತು ಕ್ರಮವಹಿಸಬೇಕಿದೆ. ಆ ನಿಟ್ಟಿನಲ್ಲಿ ವಸತಿ ಗೃಹಗಳನ್ನು ಖಾಲಿ ಮಾಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಜಾಗ ಹಸ್ತಾಂತರಿಸುವಂತೆ ಆರ್‍ಟಿಒ ಅಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು. ಪಡಿತರ ಚೀಟಿ ವಿತರಣೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳಿಗೆ ಪಡಿತರ ಚೀಟಿ ವಿತರಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಹಾರ ಪೂರೈಕೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗಳನ್ನು ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜಿಲ್ಲೆಯಲ್ಲಿ ಗೋಧಿಗೆ ಬೇಡಿಕೆ ಇಲ್ಲದಿದ್ದಲ್ಲಿ ಗೋಧಿ ಬದಲಿಗೆ ಅಕ್ಕಿಯನ್ನು ನೀಡುವಂತಾಗಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ವಸತಿ ಶಾಲೆಗಳು ಸೇರಿದಂತೆ ಸಮಾಜ ಕಲ್ಯಾಣ, ಐಟಿಡಿಪಿ, ಬಿಸಿಎಂ ಹೀಗೆ ಎಲ್ಲಾ ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಬಿಸಿನೀರನ್ನು ಒದಗಿಸಬೇಕು. ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ಬಿಸಿ ನೀರು ವ್ಯವಸ್ಥೆ ಇಲ್ಲ. ಬಿಸಿ ನೀರು ಇಲ್ಲದೆ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಸಚಿವರು ಸೂಚನೆ ನೀಡಿದರು. ಅರಣ್ಯ ಹಕ್ಕು ಪತ್ರ ವಿತರಣೆ ಜೊತೆಗೆ ಗಿರಿಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಬೇಕಿದೆ. ಐಟಿಡಿಪಿ ಇಲಾಖೆ ವ್ಯಾಪ್ತಿಯಲ್ಲಿ ಹೆಚ್ಚಿನ ಅನುದಾನವಿದ್ದು, ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ವಿಶೇಷ ಆಸಕ್ತಿ ವಹಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಸಲಹೆ ಮಾಡಿದರು.

ಹೋಂ ಸ್ಟೇಗಳಿಗೆ ಪರವಾನಿಗೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸುವದರ ಜೊತೆಗೆ ಪರವಾನಿಗೆಯನ್ನು ನೀಡುವಂತಾಗ ಬೇಕು. ಜಿಲ್ಲೆಯಲ್ಲಿ ಸುಗಮ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಹ್ವಾನಿಸಲು ಅಗತ್ಯ ಮುತುವರ್ಜಿ ವಹಿಸುವಂತೆ ಆರ್‍ಟಿಓ ಅಧಿಕಾರಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ವೈದ್ಯರ ನೇಮಕ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿವೆ. ಸದ್ಯ ಕುಟ್ಟ ಮತ್ತು ಪಾಲಿಬೆಟ್ಟ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ. ಖಾಲಿ ಇರುವ ವೈದ್ಯರ ನೇಮಕಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆಯಲಾಗಿದೆ ಎಂದು ಸಚಿವರು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಮನಸ್ವಿನಿ, ಮೈತ್ರಿ ಮತ್ತಿತರ ಯೋಜನೆಗಳು ಅರ್ಹರಿಗೆ ಕಾಲ ಕಾಲಕ್ಕೆ ತಲಪಬೇಕು ಕೊಡಗಿನ ಕಿತ್ತಳೆ ಬೆಳೆ ಅಭಿವೃದ್ಧಿಗೆ ಪ್ರೋತ್ಸಾಹಿಸ ಬೇಕು. ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಸಮರ್ಪಕವಾಗಿ ನಡೆಯಬೇಕು. ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸು ವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು. ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲಪಿಸುವ ಹೊಣೆಯನ್ನು ಅಧಿಕಾರಿಗಳು ಹೊಂದಿದ್ದು, ಆ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಸರ್ಕಾರ ಬಡವರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸಚಿವರು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಸಾರ್ವಜನಿಕರಿಗೆ ಆಂಬ್ಯುಲೆನ್ಸ್ ಕೊರತೆ ಇದ್ದು, ಹೆಚ್ಚಿನ ಆಂಬ್ಯುಲೆನ್ಸ್ ಒದಗಿಸಬೇಕು. ಆಂಬ್ಯುಲೆನ್ಸ್ ಉಚಿತವಾಗಿ ಸೇವೆ ಒದಗಿಸಬೇಕು. ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಆಸ್ಪತ್ರೆಯ ಸರ್ಜನ್ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಲ್ಪನಾ ಅವರು ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳು, ಖರ್ಚುವೆಚ್ಚ ಸಂಬಂಧಿಸಿದಂತೆ ಮಾಹಿತಿ ಪಡೆದು ಸಮರ್ಪಕವಾಗಿ ಅಂಕಿ ಅಂಶ ನೀಡದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ಜಿಲ್ಲೆಯಲ್ಲಿನ ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಉತ್ತಮ ಆಡಳಿತದ ಅಧಿಕಾರಿಗಳ ತಂಡವಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ತಲಪಿಸಲು ತಂಡೋಪಾಧಿಯಾಗಿ ಕೆಲಸ ಮಾಡಬೇಕಿದೆ ಎಂದರು.

ಜಿ.ಪಂ.ಸಿಇಓ ಚಾರುಲತಾ ಸೋಮಲ್ ಮಾತನಾಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. ಆ ದಿಸೆಯಲ್ಲಿ ಒಂದು ತಿಂಗಳಲ್ಲಿ ಬಾಕಿ ಇರುವ ಶೌಚಾಲಯಗಳನ್ನು ಪೂರ್ಣಗೊಳಿಸಲಾಗುವದು. ಮಡಿಕೇರಿ ತಾಲೂಕಿನಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವೀರಾಜಪೇಟೆ ತಾಲೂಕಿನಲ್ಲಿ 5 ಗ್ರಾ.ಪಂ.ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಾಕಿ ಇದೆ. ಘನ ತ್ಯಾಜ್ಯ ವಿಲೇವಾರಿ, ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು ಕುಶಾಲನಗರ ಕನ್ನಡ ಭವನ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ ಎಂದು ಸಚಿವರ ಗಮನ ಸೆಳೆದರು. ಸಮಿತಿ ಸದಸ್ಯ ಪಾಪು ಸಣ್ಣಯ್ಯ ಮಾತನಾಡಿ ಜಿಲ್ಲೆಯಲ್ಲಿ ನಾನಾ ಗಿರಿಜನ ಹಾಡಿಗಳಿದ್ದು, ಗಿರಿಜನರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಆದರೆ ಐಟಿಡಿಪಿ ಇಲಾಖೆ ವ್ಯಾಪ್ತಿಯಲ್ಲಿ ಹತ್ತು ಹನ್ನೆರಡು ವರ್ಷಗಳಿಂದ ಹೇಳಿದ್ದನ್ನೇ ಹೇಳಿ ಕೊಂಡು ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಬ್ಬ ಸದಸ್ಯ ಸರಾ ಚಂಗಪ್ಪ ಅವರು ಕಿರಗಂದೂರು ಗ್ರಾ.ಪಂ.ಯ ಮತ್ತೂರಿನಲ್ಲಿ ಹಲವು ಗಿರಿಜನರಿಗೆ ಹಕ್ಕು ಪತ್ರ ವಿಲ್ಲದೆ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು. ಮತ್ತೊಬ್ಬ ಸದಸ್ಯ ಡಿಸೋಜ ಅವರು ಹಾರಂಗಿ-ಗುಡ್ಡೆಹೊಸೂರು, ಕಂಬಿಬಾಣೆ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಹಾಗೆಯೇ ಹೇರೂರು ಗ್ರಾಮದಲ್ಲಿ ಗಿರಿಜನರಿಗೆ ಸಾಗುವಳಿ ಚೀಟಿ ಇಲ್ಲದೆ ಯಾವದೇ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ. ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ, ನಾನಾ ಇಲಾಖೆ ಅಧಿಕಾರಿ ಗಳು ಹಲವು ಮಾಹಿತಿ ನೀಡಿದರು.