ಸೋಮವಾರಪೇಟೆ, ಸೆ. 17: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಾರಳ್ಳಿ ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಬಡವರನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಮುಂದಾದರೆ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜೆ.ಆರ್. ಪಾಲಾಕ್ಷ ಎಚ್ಚರಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣಾರಳ್ಳಿ ಗ್ರಾಮದ ಸರ್ವೆ ನಂ 33/1ರಲ್ಲಿ 66 ಎಕರೆ ಪೈಸಾರಿ ಜಾಗವಿದ್ದು, ಆ ಜಾಗದಲ್ಲಿ 15 ದಲಿತ ಕುಟುಂಬ ಸೇರಿದಂತೆ ಇತರೆ ಜನಾಂಗದ ಬಡವರು ಹಾಗೂ ಕೂಲಿ ಕಾರ್ಮಿಕರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಕೊಡ್ಲಿಪೇಟೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು, ಪೈಸಾರಿ ಜಾಗದ ಒತ್ತುವರಿವನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವದನ್ನು ತೆರವುಗೊಳಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಬಡವರು ಮನೆ ಕಟ್ಟಿಕೊಂಡು ವಾಸಮಾಡುತ್ತಿರುವದನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಕಂದಾಯ ಇಲಾಖೆ ಮುಂದಾದರೆ ವಿವಿಧ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ದೇವರಾಜು, ಪದಾಧಿಕಾರಿಗಳಾದ ರಾಮಚಂದ್ರ, ದೊಡ್ಡಪ್ಪ ಇದ್ದರು.