ಶ್ರೀಮಂಗಲ, ಜು. 23: ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಶಿಕ್ಷಣದಲ್ಲಿ ಎಲ್ಲರೂ ಸಮಾನತೆ ಹೊಂದಬೇಕು ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಹೇಳಿದರು.

ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಬೊಮ್ಮಾಡು ಆಶ್ರ್ರಮ ಶಾಲೆಯಲ್ಲಿ ನಲಿ-ಕಲಿ ಯೋಜನೆಯಡಿ ಕೊಠಡಿ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಶೂ ಮತ್ತು ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಹಾಡಿಗಳಲ್ಲಿ ಉಳಿದು ಕೊಂಡಿರುವ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಪೋಷಕರು ಮತ್ತು ಸ್ಥಳೀಯ ಶಿಕ್ಷಕರು ಮಕ್ಕಳ ಮನವೊಲಿಸಿ ಪ್ರಯತ್ನಿಸಬೇಕೆಂದು ಹೇಳಿದರು. ಸ್ಥಳೀಯ ನೂತನ ಶಾಲಾ ಕಟ್ಟಡ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, ಈ ಕಾಮಗಾರಿ ಕಳಪೆ ಯಾಗದಂತೆ ಮೇಲಧಿಕಾರಿಗಳು ನಿಗಾವಹಿಸಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.

ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೊಮ್ಮಾಡು ಹಾಡಿ ಅಧ್ಯಕ್ಷ ಸೋಮಯ್ಯ, ತಾ.ಪಂ ಸದಸ್ಯ ಪ್ರಕಾಶ್, ಗ್ರಾ.ಪಂ. ಉಪಾಧ್ಯಕ್ಷ ರಾಮು, ಸದಸ್ಯೆ ಲಕ್ಷ್ಮಿ, ಶಾಲಾ ಮುಖ್ಯ ಶಿಕ್ಷಕಿ ಮತ್ತಿತರರು ಹಾಜರಿದ್ದರು.