ಸಿದ್ದಾಪುರ ಜ.27: ಮುಂದಿನ ಬಜೆಟ್‍ನ ಒಳಗೆ ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ತಿಳಿಸಿದ್ದಾರೆ.
ಸಿದ್ದಾಪುರ ಗ್ರಾ.ಪಂ ಗೆ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಅವರೊಂದಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದರು. ಜಿಲ್ಲೆಯ ವಿವಿಧ ಗ್ರಾ.ಪಂ. ಗಳಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿ.ಪಂ. ಅನುಮೋದನೆ ಪಡೆದು ಕೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಕಳುಹಿಸಲಾಗುವದು. ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲಾಗುವದು ಎಂದರು.
ಸಿದ್ದಾಪುರ ಬಸ್ ನಿಲ್ದಾಣ ಅಭಿವೃದ್ಧಿ, ಸಿದ್ದಾಪುರ ಗ್ರಾ.ಪಂ. ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ ಮಾರುಕಟ್ಟೆಯ ಅಭಿವೃದ್ಧಿ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವದು. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಒಂದು ವಾರದಲ್ಲಿ ಭೂಮಿ ಪೂಜೆ ನೆರವೇರಿಸ ಲಾಗುವದು. ಮಡಿಕೇರಿಯಲ್ಲಿ 4.50 ಕೋಟಿ ವೆಚ್ಚದಲ್ಲಿ ಸೈನ್ಸ್ ಪಾರ್ಕ್, ವೀರಾಜಪೇಟೆಯಲ್ಲಿ ಅಂಬೇಡ್ಕರ್ ಭವನ ಹಾಗೂ ಬಸ್ ಡಿಪೋ, ಕುಟ್ಟ-ಶ್ರೀಮಂಗಲ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವದು ಎಂದರು. ಇದೇ ಸಂದರ್ಭ ಸಿದ್ದಾಪುರದ ಮಾರುಕಟ್ಟೆ, ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು.
ಈ ಸಂದರ್ಭ ನಡೆದ ಸಭೆಯಲ್ಲಿ ವಿವಿಧ ವಾರ್ಡ್‍ಗಳ ಸಮಸ್ಯೆಗಳು ಹಾಗೂ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ವಿವರವನ್ನು ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಹರೀಶ್ ಬೋಪಣ್ಣ ಅವರಿಗೆ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಎಂ.ಕೆ ಮಣಿ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ದೇವಜಾನು, ಕರ್ಪಯ್ಯ, ರೆಜಿತ್ ಕುಮಾರ್, ಪೂವಮ್ಮ, ಪ್ರತಿಮಾ ಚಂದ್ರಶೇಖರ್, ಜಾಫರ್ ಆಲಿ, ಪ್ರೇಮ, ಸುಶೀಲ ಕಾಂಗ್ರೆಸ್ ಕಾರ್ಯಕರ್ತರಾದ ಮೂಸ, ಅಯ್ಯ, ಪಳನಿಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.
-ವಾಸು