ಸೋಮವಾರಪೇಟೆ, ಜ. 4: ನೋಟ್ ಬ್ಯಾನ್ ಮೂಲಕ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ದೇಶದ ಜನತೆಯ ಹಣವನ್ನು ಲೂಟಿ ಮಾಡುತ್ತಿದೆ. ಕೇವಲ 50 ರಿಂದ 60 ಮಂದಿ ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸಲು ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿರುವ ಎಐಸಿಸಿಯಿಂದ ಕೊಡಗು ಜಿಲ್ಲೆಗೆ ನೇಮಿಸಲ್ಪಟ್ಟಿರುವ ವೀಕ್ಷಕರಾದ ಉಷಾ ನಾಯ್ಡು ಅವರು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಮುಂಚೂಣಿ ಘಟಕದ ನಾಯಕರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜಿಲ್ಲೆಗೊಬ್ಬರಂತೆ ವೀಕ್ಷಕರನ್ನು ಕಳುಹಿಸಿದ್ದಾರೆ ಎಂದರು.
(ಮೊದಲ ಪುಟದಿಂದ)
ನ. 8ರಂದು ಭಾಷಣ ಮಾಡಿದ ಮೋದಿ ಅವರು 50 ದಿನಗಳ ನಂತರ ಎಲ್ಲವೂ ಬದಲಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಪರಿಸ್ಥಿತಿ ಕೊಂಚವೂ ಸುಧಾರಿಸಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಕಪ್ಪು ಹಣವನ್ನು ಭಾರತಕ್ಕೆ ತಂದು ಖಾತೆಗಳಿಗೆ ತಲಾ 1.5 ಲಕ್ಷ ನೀಡುವದಾಗಿ ಘೋಷಿಸಿದ್ದರು. ಆದರೆ ಇದುವರೆಗೂ 1.5 ಲಕ್ಷವಿರಲಿ; 25 ಸಾವಿರವೂ ಬಂದಿಲ್ಲ ಎಂದು ಟೀಕಿಸಿದರು.
ದಿನಕ್ಕೊಂದು ನೀತಿಗಳನ್ನು ಪ್ರಕಟಪಡಿಸುವ ಮೂಲಕ ನಮ್ಮ ಹಣವನ್ನು ನಾವುಗಳು ಉಪಯೋಗಿಸಲೂ ಸಹ ನಿರ್ಬಂಧ ವಿಧಿಸಲಾಗುತ್ತಿದೆ. ಕಾರ್ಮಿಕರು ಕೂಲಿ ಕೆಲಸಬಿಟ್ಟು ಬ್ಯಾಂಕ್‍ಗಳ ಎದುರು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಆಸ್ಪತ್ರೆಯಲ್ಲಿರುವ ರೋಗಿಗಳು ಚಿಕಿತ್ಸಾ ವೆಚ್ಚ ಭರಿಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಕ್ಯಾಶ್‍ಲೆಸ್ ವ್ಯವಹಾರದ ಬಗ್ಗೆ ಮಾತನಾಡುತ್ತಿರುವ ಮೋದಿ ಅವರಿಂದ ದೇಶದ ಆರ್ಥಿಕ ಸ್ಥಿತಿ ಬದಲಾಗುವದಿಲ್ಲ. ಬದಲಿಗೆ ಜನತೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗಿದೆ ಎಂದರು.
ಪ್ರಧಾನಿ ಮೋದಿ ಅವರ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದರೆ ಪ್ರಧಾನಿಯವರು ಯಾವದೇ ಪ್ರತಿಕ್ರಿಯೆ ನೀಡದೇ ನುಣುಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರ ಜನವಿರೋಧಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ ಎಂದರು.
ಕಾರ್ಯಕರ್ತರೇ ಕಾಂಗ್ರೆಸ್‍ನ ಬೆನ್ನೆಲುಬಾಗಿದ್ದು, ಪಕ್ಷವನ್ನು ಇನ್ನಷ್ಟು ಸಂಘಟಿಸುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂದು ಆಶಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುವವರು ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ. ಎಐಸಿಸಿಯಿಂದ ನೂತನ ಮಾರ್ಗಸೂಚಿಗಳು ಬಂದಿದ್ದು, ಕೆಲಸ ಮಾಡುವವರಿಗೆ ನಾಯಕತ್ವ ನೀಡಲಾಗುವದು. ಸಚಿವರು ಬಂದಾಗ ಮುಂದೆ ನಿಂತು ಫೋಟೋ ತೆಗೆಸಿಕೊಂಡು ನಂತರ ಸಚಿವರೊಂದಿಗೆ ದೂರು ನೀಡುವ ಮಂದಿಗಳಿಗೆ ಯಾವದೇ ಸ್ಥಾನಮಾನ ನೀಡುವದಿಲ್ಲ. ಇಂತವರಿಂದಲೇ ಕಾಂಗ್ರೆಸ್ ಸೊರಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ಕಾಂಗ್ರೆಸ್ ಹೋರಾಟದ ರಣಕಹಳೆ ಮೊಳಗಿಸಲಿದೆ. ತಾ. 9ರಂದು ಮಡಿಕೇರಿಯ ಮಾರ್ಕೆಟ್ ಎದುರು ಮಹಿಳಾ ಕಾಂಗ್ರೆಸ್‍ನಿಂದ ತಮಟೆ ಚಳುವಳಿ ನಡೆಯಲಿದೆ. ತಾ. 13ರಂದು ಮಡಿಕೇರಿಯಲ್ಲಿ ನೋಟ್ ಬ್ಯಾನ್‍ನಿಂದ ಉಂಟಾಗಿರುವ ಸಂಕಷ್ಟಗಳ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶಾದ್ಯಂತ ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಹೋರಾಟ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದ ರಮೇಶ್, ಪಕ್ಷದಲ್ಲಿ ಕಾರ್ಯನಿರ್ವಹಿಸುವವರನ್ನು ಗುರುತಿಸಿ ನಾಯಕತ್ವವನ್ನು ಒದಗಿಸಲು ಹೈಕಮಾಂಡ್ ತೀರ್ಮಾನಿಸಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ವೇದಿಕೆಯಲ್ಲಿ ಕೆ.ಪಿ.ಸಿ.ಸಿ.ಯಿಂದ ಜಿಲ್ಲೆಗೆ ನಿಯೋಜಿಸಲ್ಪಟ್ಟಿರುವ ವೀಕ್ಷಕರಾದ ಹುಸೇನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರುಗಳು ಉಪಸ್ಥಿತರಿದ್ದು, ಮಾತನಾಡಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ವಕ್ತಾರ ತಾಕೇರಿ ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಪ್ರಮುಖರಾದ ಅಬ್ಬಾಸ್, ಪ.ಪಂ. ಸದಸ್ಯರಾದ ಶೀಲಾ ಡಿಸೋಜ, ಮೀನಾಕುಮಾರಿ, ಗ್ರಾ.ಪಂ. ಅಧ್ಯಕ್ಷೆ ವನಜ ಸೇರಿದಂತೆ ಇತರರು ಭಾಗವಹಿಸಿದ್ದರು.