ಕುಶಾಲನಗರ, ಸೆ. 20: ಉತ್ತಮ ಕಾರ್ಯನಿರ್ವಹಣೆಯ ಸಾಧನೆಗಾಗಿ ಇಲ್ಲಿನ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘ ದೆಹಲಿಯ ಫ್ರಾಂಟಿಯರ್ಸ್ ಇನ್ ಕೋಪರೇಟಿವ್ ಬ್ಯಾಂಕಿಂಗ್ ಅವಾರ್ಡ್ ಗೌರವಕ್ಕೆ ಪಾತ್ರವಾಗಿದೆ. ನವದೆಹಲಿಯ ಏರೋ ಸಿಟಿಯಲ್ಲಿರುವ ಪ್ರೈಡ್ ಪ್ಲಾಜಾದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ನ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಉಪಾಧ್ಯಕ್ಷ ಕೆ.ಎಸ್ ರಾಜಶೇಖರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಈ ಪ್ರಶಸ್ತಿ ಸ್ವೀಕರಿಸಿದರು. ಆರ್ಬಿಐನ ಅಧಿಕಾರಿಗಳಾದ ಎಂ.ಬಿ. ಅಗರ್ವಾಲ್ ಮತ್ತು ಕೆ.ಎಸ್. ಮನೋಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.
ಬ್ಯಾಂಕಿಂಗ್, ಪ್ರೀಮಿಯಂ, ಹಣಕಾಸು ನಿರ್ವಹಣೆ, ವಿಮಾ ಸೌಲಭ್ಯ, ಗ್ರಾಹಕರಿಗೆ ಉತ್ತಮ ಸೇವಾ ಕಾರ್ಯ ಹಾಗೂ ಜಾಗತಿಕ ಮತ್ತು ಸ್ಥಳೀಯ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘವು 2015-16ನೇ ಆರ್ಥಿಕ ಸಾಲಿನಲ್ಲಿ ನೂತನವಾಗಿ ನಿರ್ಮಿಸಿದ ಸಂಘದ ಸುಸಜ್ಜಿತ ಕಟ್ಟಡ, ಕಚೇರಿಯ ಉತ್ತಮ ನಿರ್ವಹಣೆಗಾಗಿ ಈ ಪ್ರಶಸ್ತಿಯ ಗೌರವ ದೊರೆತಿದೆ.
ಸಂಘ ತನ್ನ 10 ವರ್ಷಗಳಲ್ಲಿ ಸದಸ್ಯರಿಗೆ ಉತ್ತಮ ಸೇವಾ ಸೌಲಭ್ಯ ನೀಡುವದರೊಂದಿಗೆ 2015-16ನೇ ಆರ್ಥಿಕ ಸಾಲಿನಲ್ಲಿ ರೂ. 15.97 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, 55.69 ಲಕ್ಷ ರೂಪಾಯಿ ಲಾಭ ಗಳಿಸಿದೆ. ವಿವಿಧ ರೀತಿಯ ಸಾಲಸೌಲಭ್ಯ, ಸದಸ್ಯರ ಚಿನ್ನಾಭರಣಗಳು ಹಾಗೂ ಠೇವಣಿಗಳಿಗೆ ಸುರಕ್ಷತೆ ಹಾಗೂ ಭದ್ರತೆ ಒದಗಿಸುವದರೊಂದಿಗೆ, ಸಂಘದ ಸಿಬ್ಬಂದಿಗೆ ತರಬೇತಿ ಹಾಗೂ ಅವರ ಸೇವಾಕ್ಷಮತೆ ಸೇರಿದಂತೆ ಹೊಸದಾಗಿ ಕೈಗೊಂಡಿರುವ ಯೋಜನೆಗಳನ್ನು ಮಾನದಂಡವನ್ನಾಗಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.