ಮಡಿಕೇರಿ, ನ. 25: ಎಮ್ಮೆಮಾಡು ಗ್ರಾಮದ ಶಾಹಿದಿಯ ಅನಾಥಾಲಯದ ಸಭಾಂಗಣದಲ್ಲಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಫೋಕ್ಸೋ ಕಾಯ್ದೆ 2012ರ ಬಗ್ಗೆ ಕಾರ್ಯಾಗಾರ ಹಾಗೂ ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಅನಿತಾ ಕಾವೇರಪ್ಪ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟಿ ಪಾಲ್ಗೊಂಡಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶೀರಾಜ್ ಅಹ್ಮದ್ ಅವರು ಮಕ್ಕಳ ಸಹಾಯವಾಣಿಯ ಬಗ್ಗೆ ಮಾಹಿತಿ ನೀಡಿ, ಚೈಲ್ಡ್‍ಲೈನ್ ಯೋಜನೆಯು ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಉಚಿತ ಮತ್ತು ತುರ್ತು ಸೇವೆಯನ್ನು ನೀಡುತ್ತದೆ. ಈ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು, ಬೆಂಬಲಿತ ವ್ಯವಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ಕಾರ್ಯಕ್ರಮಕ್ಕೆ ಸಂಪನ್ಮ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಮಕ್ಕಳಿಗಿರುವ ಹಕ್ಕು, ವಿದ್ಯೆಯ ಮಹತ್ವ, ಮೂಲಭೂತ ಹಕ್ಕುಗಳು, ಬಾಲನ್ಯಾಯ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಫೋಕ್ಸೋ ಕಾಯ್ದೆ 2012, ಅಪರಾಧ ಶಿಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಅನಿತಾ ಕಾವೇರಪ್ಪ ಮಾತನಾಡಿ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಅದನ್ನು ತಡೆಗಟ್ಟಲು ಇರುವ ಇಲಾಖೆಗಳು, ಅಪರಾಧಗಳಿಗೆ ಇರುವ ಶಿಕ್ಷೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಹಿರಿಯ ಕಾರ್ಮಿಕ ನಿರೀಕ್ಷಕ ಯತ್ನಟಿ ಮಾತನಾಡಿ, 14 ವರ್ಷದ ತನಕ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಎಂದರು. ಶೋಭಲಕ್ಮಿ ಸ್ವಾಗಸಿಸಿ, ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಹಿದಿಯ ಅನಾಥಾಲಯದ ಕಾರ್ಯದರ್ಶಿಗಳು, ಪೋಷಕರು, ಸಾರ್ವಜನಿಕರು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಹಾಗೂ ಚೈಲ್ಡ್‍ಲೈನ್ ಸಿಬ್ಬಂದಿಗಳು ಹಾಜರಿದ್ದರು.