*ಗೋಣಿಕೊಪ್ಪಲು, ಡಿ. 30: ರಾಜ್ಯ ಮಟ್ಟದ 9ನೇ ವರ್ಷದ ಮಿಲನ್ಸ್ ಕಪ್ ಫೈಸ್ ಫುಟ್ಬಾಲ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು.

ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡಾ ಉತ್ಸವಕ್ಕೆ ಜಿ.ಪಂ. ಶಿಕ್ಷಣ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಚಾಲನೆ ನೀಡಿದರು.

ಕ್ರೀಡಾಕೂಟಗಳು ಯುವಕರ ದೇಹ ದೃಢತೆಗೆ ಸಹಕಾರಿ. ಪುಟ್ಬಾಲ್ ಕ್ರೀಡೆ ಜಿಲ್ಲೆಯಲ್ಲಿ ಹಾಕಿಯಂತೆ ಮತ್ತಷ್ಟು ಜನಪ್ರೀಯತೆ ಗಳಿಸಲಿ. ಯುವಕರು ದುಷ್ಚಟಗಳಿಗೆ ಬಲಿಯಾಗದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಮ್ಮ ಮನಸ್ಸಿನ ದೃಢತೆಯನ್ನು ಕಾಪಾಡಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿ ತಂಡದ ಸದಸ್ಯರು ರಾಷ್ಟ್ರ ಅಂತರ್ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಸಾಧನೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಮಾತನಾಡಿ, ಯುವಕರಲ್ಲಿ ಒಗ್ಗಟ್ಟು, ಸ್ನೇಹ ಬೆಳೆಸಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು. ಮಿಲನ್ಸ್ ಸಂಸ್ಥೆ ನಡೆಸುತ್ತಿರುವ ಕ್ರೀಡಾಕೂಟಕ್ಕೆ ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಕಾರ ನೀಡುತ್ತದೆ ಎಂದರು. ಕ್ರೀಡಾಕೂಟ ನಡೆಸುವಾಗ ಫುಟ್ಬಾಲ್ ಅಸೋಸಿಯೇಶನ್‍ನಲ್ಲಿ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಮಿಲನ್ಸ್ ತಂಡದ ಸದಸ್ಯರಿಗೆ ಉಚಿತ ಟಿ.ಶರ್ಟನ್ನು ವಿತರಿಸಿ, ಕ್ರೀಡಾ ಉತ್ಸವಕ್ಕೆ ಪ್ರೋತ್ಸಾಹ ನೀಡಿದರು.

ಶಾಲಾ ದಿನಗಳಲ್ಲಿ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸು ವಂತಾಗಬೇಕು. ನಿತ್ಯ ಮುಂಜಾನೆ ಹಾಗೂ ಸಂಜೆ ಫುಟ್ಬಾಲ್ ಕ್ರೀಡೆಗಳನ್ನು ಆಡುವದರಿಂದ ದೇಹದ ಸ್ನಾಯುಗಳು ಬಲಿಷ್ಠಗೊಳ್ಳುತ್ತದೆ. ಬಲಿಷ್ಠ ದೇಹ ಹೊಂದಿದ ಯುವಕರಿಂದ ಉತ್ತಮ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.

ಮೂರು ದಿನಗಳು ನಡೆಯುವ ಕ್ರೀಡಾ ಕೂಟದಲ್ಲಿ 32 ತಂಡಗಳು ಭಾಗವಹಿಸಲಿದ್ದು, ಕೇರಳ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಿಂದ ಕ್ರೀಡಾರ್ಥಿಗಳು ಪಾಲ್ಗೊಂಡು ಕ್ರೀಡಾ ಉತ್ಸವಕ್ಕೆ ಮೆರುಗು ತರಲಿದ್ದಾರೆ ಎಂದು ಮಿಲನ್ಸ್ ಬಾಯ್ಸ್ ಯೂತ್ ಕ್ಲಬ್‍ನ ಅಧ್ಯಕ್ಷ ಎಂ.ಎಂ. ಲಿಜೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಪಿ.ಸಿ. ಕರುಂಬಯ್ಯ, ಬೆಳೆಗಾರ ಮುಕ್ಕಾಟಿರ ಸಂತೋಷ್, ಮಿಲನ ಯೂತ್ ಕ್ಲಬ್ ಗೌರವ ಅಧ್ಯಕ್ಷ ವಿ. ಎಸ್. ಚಂದ್ರ, ಕೆ.ಡಿ.ಎಫ್.ಎ ಕಾರ್ಯದರ್ಶಿ ಐ.ಎಸ್. ಪೊನ್ನಪ್ಪ, ಜಿ.ಎಂ.ಪಿ ಶಾಲೆ ಮುಖ್ಯೋಪಾಧ್ಯಾಯಿನಿ ಲೀಲಾವತಿ, ವರ್ತಕ ಹಂಸ ಉಪಸ್ಥಿತರಿದ್ದರು. ವೀರಾಜಪೇಟೆಯ ಆಕ್ಸ್‍ಫರ್ಡ್ ಹಾಗೂ ಪಾಲಿಬೆಟ್ಟ ಕೊಡಗು ಎಫ್ ಸಿ ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಆಕ್ಸ್ಫರ್ಡ್ ತಂಡದ ವಿರುದ್ದ ಕೊಡಗು ಎಫ್.ಸಿ ತಂಡ 5-0 ಗೋಲುಗಳನ್ನು ಬಾರಿಸಿ ವಿಜೇತರಾದರು.