ಮಡಿಕೇರಿ, ಅ.4 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸುಸ್ಸಜಿತ ಬಹುಮಹಡಿ ಕಟ್ಟಡ ನಿರ್ಮಿಸಲು ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ತಯಾರಿ ನಡೆಸಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ.ಬೈರಪ್ಪ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಬಳಿ ಸುಮಾರು 1 ಕೋಟಿ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವದ ರಿಂದ ಕಾಲೇಜಿಗೆ ಸುಸ್ಸಜಿತ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬಹುಮಹಡಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲಿಯೇ ಆಡಳಿತ ಮಂಡಳಿ ಹಾಗೂ ಕಾಲೇಜು ಕಟ್ಟಡ ಅಭಿವೃದ್ಧಿ ಸಂಬಂಧ ಇಂಜಿನಿಯರ್ಗಳ ಜೊತೆ ಚರ್ಚೆ ನಡೆಸಿ ಒಂದು ವರ್ಷದ ಒಳಗೆ ಕಟ್ಟಡ ನಿರ್ಮಾಣಕ್ಕೆ ಯತ್ನಿಸಲಾಗುವದು.
ಫೀಲ್ಡ್ ಮಾರ್ಷಲ್ ಕೆ,ಎಂ.ಕಾರ್ಯಪ್ಪ ಕಾಲೇಜು ಅಭಿವೃದ್ಧಿಗೆ ಸಂಬಂಧಿಸಿದಂತೆ 36.6 ಎಕರೆ ಜಾಗವಿದ್ದು, ಇದರ ಬಳಕೆ ಪೂರ್ಣವಾಗಿ ಕಾಲೇಜು ಅಭಿವೃದ್ಧಿಗೆ ಸಂಬಂಧಿಸಿದಂತೆ ಮೀಸಲಿಡ ಲಾಗುವದು, ಇದರ ಜೊತೆಗೆ ಶಿಕ್ಷಕರ ನೇಮಕಕ್ಕೆ ಅಗತ್ಯ ತಯಾರಿ ನಡೆಸಲಾಗುವದು ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, 2 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಶೇ. 65 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರು ಹೆಚ್ಚಾಗಿ ದೂರದ ಗ್ರಾಮೀಣ ಭಾಗಗಳಿಂದ ಬರುವದರಿಂದ ಮಹಿಳಾ ವಸತಿ ನಿಲಯದ ಬೇಡಿಕೆ ಸಾಕಷ್ಟು ವರ್ಷದಿಂದ ಇತ್ತು, ಸದ್ಯ ಈಗ ಯು.ಜಿ.ಸಿ ಸಹಯೋಗದೊಂದಿಗೆ ಈಡೇರಿದೆ ಎಂದು ತಿಳಿಸಿದರು. ವಿದ್ಯಾರ್ಥಿ ವಸತಿ ನಿಲಯದಲ್ಲಿ 11 ಕೊಠಡಿಗಳು ಸೇರಿದಂತೆ, ಗ್ರಂಥಾಲಯ, ಕಚೇರಿ, ಅಡುಗೆ ಮನೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾರ್ಯಕಾರಿ ಅಭಿಯಂತರ ಎಂ.ಚಂದ್ರಶೇಖರ್, ವಾರ್ಡನ್ ಗಾಯತ್ರಿ ದೇವಿ ಹಾಗೂ ಕಾಲೇಜು ಪಿ.ಟಿ.ಐ ಪದಾಧಿಕಾರಿಗಳಾದ ನಂದಿನೆರವಂಡ ಅಪ್ಪಯ್ಯ, ಬಿ.ಎಸ್.ಆನಂದ, ಶಿವಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಅಭಿವೃದ್ಧಿಗೆ ಕ್ರಮ: ಪ್ರೊ.ಕೆ.ಬೈರಪ್ಪ