ಸೋಮವಾರಪೇಟೆ, ಆ. 23: ಸಾಂಸಾರಿಕ ಜೀವನ ಕಲಹದಿಂದ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ಪ್ರಾಣ ಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅಸ್ಥಿಪಂಜರದ ಸ್ಥಿತಿಯಲ್ಲಿ ಇಂದು ಗೋಚರವಾಗಿದೆ.
ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಸುಬೂರು ಗ್ರಾಮ ನಿವಾಸಿ ಕುಶಾಲ (45) ಎಂಬವರ ಅಸ್ಥಿಪಂಜರ ಇಂದು ಸಮೀಪದ ಬೇಳೂರು ಬಾಣೆಗೆ ಒತ್ತಿಕೊಂಡಿರುವ ಊರುಡುವೆ ಜಾಗದ ಕಾಡಿನೊಳಗೆ ಪತ್ತೆಯಾಗಿದೆ.
ಕುಶಾಲ ಅವರು ಇದುವರೆಗೆ ಮೂರು ವಿವಾಹವಾಗಿದ್ದು, ಮೊದಲನೇ ಪತ್ನಿ ಸಾವನ್ನಪ್ಪಿದ ನಂತರ ಆಲೇಕಟ್ಟೆ ರಸ್ತೆಯ ಯುವತಿಯೊಂದಿಗೆ ಎರಡನೇ ಮದುವೆಯಾಗಿದ್ದ. ನಂತರ ಈಕೆಯೂ ಮನೆಬಿಟ್ಟು ಹೋದ ಹಿನ್ನೆಲೆ ಸುಳ್ಯದ ಯುವತಿಯನ್ನು ಮೂರನೇ ಮದುವೆಯಾಗಿ ಕುಸುಬೂರು ಗ್ರಾಮದಲ್ಲಿ ನೆಲೆಸಿದ್ದ. ಕಳೆದ ಒಂದು ತಿಂಗಳ ಹಿಂದೆ ಸಂಸಾರದಲ್ಲಿ ಕಲಹವೇರ್ಪಟ್ಟ ಹಿನ್ನೆಲೆ ಮೂರನೇ ಪತ್ನಿ ದಮಯಂತಿ ಅವರು, ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿ ತವರು ಮನೆಗೆ ತೆರಳಿದ್ದರು.
ಅಂದಿನಿಂದ ನಾಪತ್ತೆಯಾಗಿದ್ದ ಕುಶಾಲ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಸ್ಥಳಿಯರು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇಂದು ಮಧ್ಯಾಹ್ನ ಸಮಯದಲ್ಲಿ ಕೆಲವರು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ ಮರದ ಕೊಂಬೆಯಲ್ಲಿ ತಲೆ ಬುರುಡೆ ಮಾತ್ರ ನೇತಾಡುತ್ತಿದ್ದುದು ಕಂಡುಬಂದಿದೆ.
ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ ಮೇರೆ ಠಾಣಾಧಿಕಾರಿ ಮಂಚಯ್ಯ, ಸಿಬ್ಬಂದಿಗಳಾದ ಜಗದೀಶ್, ಶಿವಕುಮಾರ್, ಮಹದೇವಸ್ವಾಮಿ ಸೇರಿದಂತೆ ಇತರರು ತೆರಳಿ ಸ್ಥಳಪರಿಶೀಲನೆ ನಡೆಸಿದ್ದು, ಹಗ್ಗದಲ್ಲಿ ತಲೆಬುರುಡೆ ನೇತಾಡುತ್ತಿದ್ದು, ಕುತ್ತಿಗೆಯಿಂದ ಕೆಳಗಿನವರೆಗಿನ ದೇಹದ ಎಲುಬುಗಳು ನೆಲದಲ್ಲಿ ಕಂಡುಬಂದಿವೆ.
ಒಂದು ತಿಂಗಳ ಹಿಂದೆಯೇ ಪ್ರಾಣಹತ್ಯೆಗೆ ಒಳಗಾಗಿರಬಹುದು ಎನ್ನಲಾಗಿದ್ದು, ಇದರಿಂದಾಗಿಯೇ ದೇಹದ ಭಾಗಗಳು ಸಂಪೂರ್ಣ ಕೊಳೆತು ಹೋಗಿದ್ದು ಗುರುತು ಸಿಗದ ಸ್ಥಿತಿಗೆ ತಲುಪಿದೆ. ಅಸ್ಥಿಪಂಜರದ ಬಳಿಯಿರುವ ಪಾದರಕ್ಷೆ ಹಾಗೂ ಬಟ್ಟೆಗಳಿಂದ ಕುಶಾಲ ಅವರ ಕಳೇಬರ ಎಂಬುದು ಪತ್ತೆಯಾಗಿದ್ದು, ಸುಳ್ಯದಲ್ಲಿರುವ ಪತ್ನಿ ದಮಯಂತಿ ಅವರಿಗೆ ವಿಷಯ ಮುಟ್ಟಿಸಲಾಗಿದೆ. ಸದ್ಯ ಕಳೇಬರ ಘಟನಾ ಸ್ಥಳದಲ್ಲಿಯೇ ಇದ್ದು, ಕುಶಾಲ ಅವರ ವಾರಸುದಾರರು ಇಂದು ಆಗಮಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ.