ಮಡಿಕೇರಿ, ಆ.18 : ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಅವರ ಹತ್ಯಾ ಪ್ರಕರಣವನ್ನು ಖಂಡಿಸಿರುವ ಕೊಡಗು ಜಿಲ್ಲಾ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಆರೋಪಿಗಳ ಬಂಧನಕ್ಕೆ ಒಂದು ವಾರದ ಗಡುವು ನೀಡಿದೆ. ತಪ್ಪಿದಲ್ಲಿ ಜಿಲ್ಲೆಯಾದ್ಯಂತ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್.ಮೇದಪ್ಪ, ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ರಾತ್ರಿ ಚಾಲನೆಯಲ್ಲಿ ತೊಡಗಿರುವ ಆಟೋ ಚಾಲಕರಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ. ಪ್ರವೀಣ್ ಪೂಜಾರಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಪಿಗಳ ಬಂಧನಕ್ಕಾಗಿ ಒತ್ತಾಯಿಸಲಾಗಿದೆ. ಹತ್ಯೆ ಮಾಡಿದವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿರುವದಾಗಿ ಎಸ್‍ಪಿ ಭರವಸೆ ನೀಡಿದ ಕಾರಣ ಸಂಘವು ಒಂದು ವಾರಗಳ ಗಡುವನ್ನು ನೀಡುತ್ತಿರುವ ದಾಗಿ ಮೇದಪ್ಪ ತಿಳಿಸಿದರು.

ಒಂದು ವಾರದಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ರಸ್ತೆ ತಡೆ ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳುವದಾಗಿ ಮೇದಪ್ಪ ಎಚ್ಚರಿಕೆ ನೀಡಿದರು.

ಈ ಹಿಂದೆ ರಾತ್ರಿ ವೇಳೆ ಆಟೋ ಚಾಲಿಸುತ್ತಿದ್ದ ಚಾಲಕರೊಂದಿಗೆ ಸುರಕ್ಷತೆಯ ದೃಷ್ಟಿಯಿಂದ ಮತ್ತೊಬ್ಬ ರನ್ನು ಕರೆದೊಯ್ಯಲು ಅವಕಾಶವಿತ್ತು. ಆದರೆ, ಈ ಅವಕಾಶವನ್ನು ಕೆಲವು ಆಟೋ ಚಾಲಕರು ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಇಬ್ಬರು ಚಾಲಕರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದೀಗ ಪ್ರವೀಣ್ ಪೂಜಾರಿ ಹತ್ಯೆ ಘಟನೆ ನಡೆದಿರುವ ದರಿಂದ ಮತ್ತೊಮ್ಮೆ ಇಬ್ಬರಿಗೆ ಅವಕಾಶ ನೀಡುವಂತೆ ಪೊಲೀಸರಲ್ಲಿ ಅನುಮತಿ ಕೋರುವದಾಗಿ ಮೇದಪ್ಪ ತಿಳಿಸಿದರು.

ಆಟೋ ಚಾಲಕರಿಂದ ನಿಯಮ ಉಲ್ಲಂಘನೆ

ರಾತ್ರಿ ವೇಳೆ ಆಟೋ ಚಲಾಯಿಸುವ ಚಾಲಕರು ಪೊಲೀಸ್ ಠಾಣೆÉಯಲ್ಲಿ ಸಹಿ ಮಾಡಬೆÉೀಕೆನ್ನುವ ನಿಯಮವಿದೆ. ಆದರೆ, ಕೆಲವು ಚಾಲಕರು ನಿಯಮವನ್ನು ಉಲ್ಲಂಘಿಸುತ್ತಿದ್ದು, ಸಹಿ ಮಾಡುವವರು ಒಬ್ಬರಾದರೆ ಆಟೋ ಚಾಲಿಸುವವರು ಮತ್ತೊಬ್ಬರಾಗಿದ್ದಾರೆ. ಪರವಾನಗಿ ಇಲ್ಲದ ವ್ಯಕ್ತಿಗಳು ಕೂಡ ಆಟೋ ಚಲಾಯಿಸುತ್ತಿದ್ದು, ಇವರುಗಳ ಮೇಲೆ ಪೊಲೀಸರು ನಿಗಾ ವಹಿಸಬೇಕಾಗಿದೆ. ಪರವಾನಗಿ ರಹಿತ ಚಾಲನೆಯಿಂದ ಏನಾದರು ಅನಾಹುತಗಳು ಸಂಭವಿಸಿದಲ್ಲಿ ಅದಕ್ಕೆ ಸಂಘ ಹೊಣೆಯಲ್ಲ ಮತ್ತು ಯಾವದೇ ಸಹಕಾರವನ್ನು ನೀಡುವದಿಲ್ಲವೆಂದು ಮೇದಪ್ಪ ಇದೇ ಸಂದರ್ಭ ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಟಿ.ಸುಂದರ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಪ್ರಸನ್ನ, ಖಜಾಂಚಿ ಎಸ್.ಬಿ.ದಿಲೀಪ್, ನಗರ ಉಪಾಧ್ಯಕ್ಷ ಪಿ.ಆರ್.ಡೆನ್ನಿ, ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್ ಉಪಸ್ಥಿತರಿದ್ದರು.