ಗೋಣಿಕೊಪ್ಪ, ಸೆ. 1: ಆಗಸ್ಟ್ ಹದಿನಾಲ್ಕರಂದು ಕುಶಾಲನಗರದಲ್ಲಿ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ರಾಜ್ಯ ಸರಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಜಿಲ್ಲಾಧಿಕಾರಿ ಗಳಿಗೆ ಸುತ್ತೋಲೆ ಕಳುಹಿಸಿದೆ.ತಾ. 14ರಂದು ಕುಶಾಲನಗರದಲ್ಲಿ ಸಂಕಲ್ಪ ಯಾತ್ರೆ ನಡೆದು, ಅಂದು ರಾತ್ರಿ ಗುಡ್ಡೆಹೊಸೂರು ಬಳಿ ಆಟೋ ಚಾಲಿಸುತ್ತಿದ್ದ ಪ್ರವೀಣ್ ಪೂಜಾರಿ (38)ಯನ್ನು ಅಡ್ಡಗಟ್ಟಿದ ದುಷ್ಕರ್ಮಿ ಗಳು ಕುತ್ತಿಗೆ ಕುಯ್ದು ಬರ್ಭರವಾಗಿ ಹತ್ಯೆಗೈದಿದ್ದರು. ತಲೆಮರೆಸಿಕೊಂಡಿದ್ದ ದುಷ್ಕರ್ಮಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ತುಫೈಲ್, ನಯಾಜ್, ಮಹಮದ್ ಮುಸ್ತಫಾ, ಇಲಿಯಾಸ್, ಇರ್ಫಾನ್ ಅಹ್ಮದ್, ಟಿ.ಎ. ಹ್ಯಾರಿಸ್, ಮುಜೀಬ್ ರೆಹಮಾನ್, ಷರೀಫ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಮತ್ತೋರ್ವ ಆರೋಪಿ ಮಹಮ್ಮದ್ ಅಫ್ರೀನ್ ಅಲಿಯಾಸ್ ಇಲಿಯಾಸ್ ಅಹಮದ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಪೊಲೀಸ್ ತಂಡಕ್ಕೆ ಐಜಿ ಬಿ.ಕೆ. ಸಿಂಗ್ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ತಾ. 14ರ ಪ್ರವೀಣ್ ಪೂಜಾರಿ ಹತ್ಯೆಯ ಕುರಿತು ಜಿಲ್ಲಾಧಿಕಾರಿಗಳು ತಾ. 22.8.16ರಂದು ಸರಕಾರಕ್ಕೆ ವರದಿ ನೀಡಿದ್ದು, ಪಂಜಿನ ಮೆರವಣಿಗೆ ಸಂದರ್ಭ ಮಸೀದಿಯೆದುರು ಎರಡು ಪಂಗಡಗಳು ಪರಸ್ಪರ ಘೋಷಣೆ ಕೂಗಿ ಆರಂಭಗೊಂಡ ಘಟನೆ ಕೊಲೆಯಾಗಿ ಪರಿವರ್ತನೆ ಆಗಿರುವದಾಗಿ ಹೇಳಿದ್ದಾರೆ.
ಪರಿಹಾರ ಧನವನ್ನು ಪ್ರವೀಣ್ ಪೂಜಾರಿಯ ಕುಟುಂಬಕ್ಕೆ ನೀಡಲು ಸೂಚಿಸಿರುವದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸೀತಾರಾಂ ‘ಶಕ್ತಿ’ಗೆ ತಿಳಿಸಿದ್ದಾರೆ.