ಮಡಿಕೇರಿ, ಆ. 11: ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ‘ಮಾಸ್ಟರ್ ಪ್ಲಾನ್' ತಯಾರಿಸಿ ನೀಡಲು ಹೇಳಿದ್ದು, ಸಧ್ಯದಲ್ಲೇ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಪ್ರವಾಸೋದ್ಯಮ ಇಲಾಖೆಗಳೊಂದಿಗೆ ಕುಳಿತು ಚರ್ಚಿಸುವದಾಗಿ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಮದನ್ ಸೋಮಣ್ಣ ಹೇಳಿದರು.

ಅವರು ಅಸೋಸಿಯೇಷನ್ ಮಹಾಸಭೆಯಲ್ಲಿ ಮಾತನಾಡಿ ರಾಜ್ಯ ಪ್ರವಾಸೋದ್ಯಮ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ ಅವರು ‘ಮಾಸ್ಟರ್ ಪ್ಲಾನ್' ನೀಡಲು ಸೂಚಿಸಿದರೆಂದು ತಿಳಿಸಿದರು.

ಬದಲಾದ ಪ್ರವಾಸೋದ್ಯಮ ನೀತಿಯಿಂದ ರೇಟಿಂಗ್ ಏಜೆನ್ಸೀಸ್ ಹೋಂ ಸ್ಟೇ ಪರವಾನಗಿ ತೀರ್ಮಾನಿಸುವಂತಾಗಿದ್ದು, ಏಜೆನ್ಸಿಗಳು ಹೇಳುತ್ತಿರುವ ದುಬಾರಿ ಶುಲ್ಕವನ್ನು ಕಡಿತಗೊಳಿಸಲು ಮಾತನಾಡಲಾಗುವದೆಂದು ಮದನ್ ಸೋಮಣ್ಣ ಹೇಳಿದರು.

ಗೋಣಿಕೊಪ್ಪಲು ಪಾಮ್ ವ್ಯಾಲಿ ರಿಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ಹೋಂ ಸ್ಟೇ ಸದಸ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಸವಿತಾ ಅಪ್ಪಣ್ಣ, ಮಿಕ್ಕಿ ಕಾಳಪ್ಪ, ದಿಲೀಪ್ ಚೆಂಗಪ್ಪ, ಕೆ.ಎಂ. ಕರುಂಬಯ್ಯ ಹಾಗೂ ವಿಜು ಚೆಂಗಪ್ಪ ಉಪಸ್ಥಿತರಿದ್ದರು.