ಮಡಿಕೇರಿ, ನ. 17: ಬಿಳಿ ನಂಬರ್ ಪ್ಲೇಟ್ ಹೊಂದಿರುವ ಕಾರುಗಳನ್ನು ಬಾಡಿಗೆಗೆ ಓಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘ ಒತ್ತಾಯಿಸಿದೆ. ತಾ. 25 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್, ಕೊಡಗು ಜಿಲ್ಲೆಯಲ್ಲಿ ಬಿಳಿ ಬೋರ್ಡ್ ಕಾರುಗಳು ಅನಧಿಕೃತವಾಗಿ ಬಾಡಿಗೆಗೆ ಓಡಿಸುತ್ತಿರುವ ಬಗ್ಗೆ ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಾರಿಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಅಧಿಕೃತವಾಗಿ ಹಳದಿ ಬೋರ್ಡ್ ವಾಹನಗಳನ್ನು ಹೊಂದಿರುವ ಸಂಘದ ಸದಸ್ಯರುಗಳು ನಿಯಮಕ್ಕನುಸಾರವಾಗಿ ಸರ್ಕಾರದ ಬೊಕ್ಕಸಕ್ಕೆ ವಿವಿಧ ರೀತಿಯ ತೆರಿಗೆ, ಇನ್ಸ್ಯೂರೆನ್ಸ್ ಮತ್ತು ಎಫ್ಸಿ ಇವುಗಳನ್ನು ಭರಿಸುತ್ತಿದ್ದರೂ ಅನಧಿಕೃತವಾಗಿ ಬಿಳಿ ಬೋರ್ಡ್ ವಾಹನಗಳು ಟ್ಯಾಕ್ಸಿಗಳಾಗಿ ಸಂಚರಿಸುತ್ತಿರುವದರಿಂದ ಸರಕಾರದ ಸಾರಿಗೆ ನಿಯಮ ಅರ್ಥಹೀನವಾಗಿದೆ. ಅನಧಿಕೃತವಾಗಿ ಓಡಿಸುತ್ತಿರುವ ಟ್ಯಾಕ್ಸಿಗಳಿಗೆ ಯಾವದೇ ರೀತಿಯ ಹೊರೆ ಇರುವದಿಲ್ಲ. ಅದರಲ್ಲೂ ಹೋಂ ಸ್ಟೇ ಮಾಲೀಕರು, ಹೊಟೇಲ್ ಮಾಲೀಕರು ಅವರವರ ಕಾರುಗಳನ್ನು ಟ್ಯಾಕ್ಸಿ ರೂಪದಲ್ಲಿ ಓಡಿಸುತ್ತಿದ್ದು, ಇದರಿಂದಾಗಿ ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆ ಮತ್ತಿತರ ವೆಚ್ಚವನ್ನು ಭರಿಸುತ್ತಿರುವ ಅಧಿಕೃತ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇರಳ ಸರ್ಕಾರ ಕರ್ನಾಟಕ ಸರ್ಕಾರದ ಪ್ರವಾಸಿ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಪ್ರವಾಸಿಗರ ವಾಹನ ಮತ್ತು ಚಾಲಕರ ಸಂಘದ ಸದಸ್ಯರುಗಳಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ನಮ್ಮ ವಾಹನಗಳ ಮೇಲಿನ ಬ್ಯಾಂಕ್ ಸಾಲ ಮತ್ತು ಫೈನಾನ್ಸಿಯಲ್ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿಸಲಾಗದೆ ಕೆಲವರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದರು. ಕೇರಳದ ಪ್ರವಾಸಿ ವಾಹನಗಳಿಗೆ ಅಕ್ಟೋಬರ್ ತಿಂಗಳಿ ನಲ್ಲಿ ಕರ್ನಾಟಕಕ್ಕೆ ಬರಬೇಕಾದರೆ ಯಾವದೇ ರೀತಿಯ ತೆರಿಗೆ ಪಾವತಿಸದೆ ಫ್ರೀ ಎಂಟ್ರಿ ಎಂದು ಘೋಷಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ದಸರಾ ಕೊಡುಗೆ ಎಂದು ಸಬೂಬು ಹೇಳುತ್ತಾರೆ. ಅದೇ ರೀತಿಯಾಗಿ ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ಹೋಗಲು ಒಂದು ತಿಂಗಳು ನಮಗೆ ಈ ರೀತಿಯ ಕೊಡುಗೆ ಸಿಗುತ್ತಿಲ್ಲ. ಇದನ್ನು ಯಾರೂ ಕೂಡಾ ಇದುವರೆಗೆ ಪ್ರಶ್ನಿಸಿಲ್ಲ. ನಮ್ಮ ಸರ್ಕಾರಕ್ಕೆ ಪ್ರವಾಸೋದ್ಯಮದ ಬಗ್ಗೆ ಯಾವದೇ ರೀತಿಯ ಕಾಳಜಿ ಇದ್ದಂತಿಲ್ಲ. ನಮ್ಮ ಪ್ರವಾಸಿ ವಾಹನಗಳು ಕೇರಳಕ್ಕೆ ತೆರಳಬೇಕಾದರೆ ಟೆಂಪೋ ಟ್ರ್ಯಾವೆಲ್ಲರ್ 1.42 ಲಕ್ಷ, ಇನ್ನೋವಾ 98 ಸಾವಿರ, 32 ಮತ್ತು 2 ಸಾವಿರ ರೂ.ಗಳಂತೆ ಪಾವತಿಸಿ ತೆರಳಬೇಕಾಗುತ್ತದೆ ಎಂದು ಪ್ರದೀಪ್ ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು. ಜಿಲ್ಲಾ ಪ್ರವಾಸಿ ವಾಹನ ಮಾಲೀಕರು ಮತ್ತು ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಸೋನ್ಸ್, ಸದಸ್ಯರುಗಳಾದ ಕೆ. ಸಂಪತ್, ಎಂ. ಬಿ. ಉಮೇಶ್, ಕೆ. ಯು. ಸುಬ್ರಮಣಿ ಹಾಗೂ ಎಂ. ಎ. ರಫೀಕ್ ಉಪಸ್ಥಿತರಿದ್ದರು.