ಸೋಮವಾರಪೇಟೆ, ಮೇ 24: ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆ ಕೊಡಗಿನ ಪ್ರವಾಸಿ ತಾಣಗಳು ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ 46 ಲಕ್ಷ ರೂಪಾಯಿ ವೆಚ್ಚದಲ್ಲಿ ತಾಲೂಕಿನ ತೋಳೂರುಶೆಟ್ಟಳ್ಳಿ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣವಾದ ಭತ್ತದ ರಾಶಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿನ ಭತ್ತದರಾಶಿ ಬೆಟ್ಟದ ಬಗ್ಗೆ ಲೇಖನಗಳನ್ನು ಬರೆದು, ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿ, ಸರಕಾರ ಇದರ ಅಭಿವೃದ್ಧಿ ಮಾಡುವಂತೆ ಮಾಡುವಲ್ಲಿ ಇಲ್ಲಿನ ಪತ್ರಕರ್ತರ ಪ್ರಯತ್ನವನ್ನು ಶ್ಲಾಘಿಸಿದ ಶಾಸಕರು, ಏಷ್ಯಾದಲ್ಲಿಯೇ ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕೊಡಗು ಜಿಲ್ಲೆ ಯಶಸ್ವಿಯಾಗಿದೆ.

ಮುಂದಿನ ದಿನಗಳಲ್ಲಿ ಇಲ್ಲಿನ ಪ್ರವಾಸಿ ತಾಣಗಳು ಅಭಿವೃದ್ಧಿ ಪಡಿಸುವದರೊಂದಿಗೆ ಪ್ರವಾಸಿಗರಿಗೆ ಮೂಲಭೂತ ಸವಲತ್ತನ್ನು ಒದಗಿಸಿದಲ್ಲಿ ಕೊಡಗಿನ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಸಾಧಿಸುವದರಲ್ಲಿ ಸಂಶಯವಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹಲವಾರು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿನ ಭತ್ತದ ರಾಶಿ ಬೆಟ್ಟವಿರುವ ಸಿಂಗನಳ್ಳಿ ಗ್ರಾಮಕ್ಕೆ ರಸ್ತೆ ಇದ್ದರೂ, ದುರಸ್ತಿ ಕಂಡಿರಲಿಲ್ಲ. ಇದೀಗ ಪ್ರವಾಸಿ ತಾಣದ ಅಭಿವೃದ್ಧಿಯೊಂದಿಗೆ ಗ್ರಾಮ ಅಭಿವೃದ್ಧಿ ಕಾಣಲಿದೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು. ಈ ಪ್ರವಾಸಿ ತಾಣ ಹಾಸನ ಜಿಲ್ಲಾ ಗಡಿ ಭಾಗದಲ್ಲಿದ್ದು ಎರಡೂ ಜಿಲ್ಲೆಗಳ ಅನ್ಯೋನ್ಯತೆ ಹೆಚ್ಚಾಗಲಿದೆ ಎಂದರು.

ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯ ಧರ್ಮಪ್ಪ, ತೋಳೂರುಶೆಟ್ಟಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಪ್ರದೀಪ್, ಸದಸ್ಯರಾದ ಎಚ್.ಎಚ್. ಈರಪ್ಪ, ಗ್ರಾಮದ ಪ್ರಮುಖರುಗಳಾದ ಎಸ್.ಪಿ. ಮಾಚಯ್ಯ, ಎಸ್.ಬಿ. ಯುವರಾಜ್, ರಾಜ್‍ಕುಮಾರ್, ಕೆ.ಕೆ. ಸುಧಾಕರ್ ಹಾಗೂ ಇತರರು ಉಪಸ್ಥಿತರಿದ್ದರು.

ಕೀಳು ರಾಜಕೀಯ: ಭತ್ತದ ರಾಶಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸುವ ಸಂದರ್ಭ ಇಲಾಖೆಯ ಇಂಜಿನಿಯರ್‍ಗಳು ಭಾಗವಹಿಸದಂತೆ ಬ್ಲಾಕ್ ಕಾಂಗ್ರೆಸ್‍ನ ನಾಯಕರು ಮೌಖಿಕ ಆದೇಶ ನೀಡಿದ್ದಾರೆ. ಒಂದು ವೇಳೆ ಭೂಮಿಪೂಜೆಯಲ್ಲಿ ಭಾಗವಹಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ. ಇಂತಹ ಕೀಳು ರಾಜಕೀಯ ಮಾಡುವದರಲ್ಲಿ ಈ ಮಹಾನ್ ನಾಯಕರು ನಿಸ್ಸೀಮರು ಎಂದು ಶಾಸಕ ರಂಜನ್ ಲೇವಡಿಯಾಡಿದರು.

ಇಲ್ಲಿನ ಕಾಂಗ್ರೆಸ್‍ನ ನಾಯಕರೊಬ್ಬರು ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಪಕ್ಷದವರನ್ನು ಆಹ್ವಾನಿಸಿಲ್ಲ ಎಂಬ ನೆಪವೊಡ್ಡಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹೋಗಬಾರದೆಂದು ತಾಕೀತು ಮಾಡಿದ್ದಾರೆ.

ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಮಾಧ್ಯಮದೆದುರು ಅಸಮಾಧಾನ ಹೊರಹಾಕಿದರು.