ಮಡಿಕೇರಿ, ನ. 8: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2016-17ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ವಿಶೇಷ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಲಘು ವಾಹನ ಚಾಲನ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಯ 13 ಹಾಗೂ ಪರಿಶಿಷ್ಟ ಪಂಗಡದ 4 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ರೂ. 2 ಲಕ್ಷಗಳ ಸಹಾಯ ಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರವಾಸಿ ಟ್ಯಾಕ್ಸಿಗೆ ತಗಲುವ ಒಟ್ಟು ವೆಚ್ಚದಲ್ಲಿ ರೂ. 2 ಲಕ್ಷಗಳನ್ನು ಸಹಾಯ ಧನದ ರೂಪದಲ್ಲಿ, ಶೇ. 5 ರಷ್ಟು ಫಲಾನುಭವಿ ಭರಿಸುವದು ಮತ್ತು ಒಟ್ಟು ಕಾರಿನ ಬೆಲೆಯ ಉಳಿಕೆ ಮೊತ್ತವನ್ನು ಫಲಾನುಭವಿಯು ಬ್ಯಾಂಕು ಸಾಲದ ಮುಖಾಂತರ ಭರಿಸಿ ಪ್ರವಾಸಿ ಟ್ಯಾಕ್ಸಿ ವಿತರಿಸಲು ಯೋಜನೆಯನ್ನು ರೂಪಿಸಲಾಗಿದೆ.
ಅರ್ಜಿದಾರರು ಹೊಂದಿರಬೇಕಾದ ಅರ್ಹತೆಗಳು: ಅರ್ಜಿದಾರರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ವಯಸ್ಸು 20 ರಿಂದ 40 ವರ್ಷದೊಳಗಿರಬೇಕು. ಕನಿಷ್ಟ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಶೇ. 45 ಅಂಕಗಳೊಂದಿಗೆ ತೆರ್ಗಡೆಯಾದ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವದು. ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಟ ಒಂದು ವರ್ಷ ಪೂರ್ಣಗೊಂಡಿರಬೇಕು. ಅಭ್ಯರ್ಥಿಗಳು ವಾಹನ ಚಾಲನಾ ಪರವಾನಿಗೆಯೊಂದಿಗೆ ಬ್ಯಾಡ್ಜನ್ನೂ ಹೊಂದಿರಬೇಕು. ಕೊಡಗು ಜಿಲ್ಲೆಯ ನಿವಾಸಿಯಾಗಿರಬೇಕು. ಯಾವದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿರುತ್ತದೆ. ವಾರ್ಷಿಕ ಆದಾಯದ ಮಿತಿ: ನಗರ ಪ್ರದೇಶದ ಅಭ್ಯರ್ಥಿಗಳಿಗೆ ರೂ. 2 ಲಕ್ಷ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ರೂ. 1.50 ಲಕ್ಷಗಳು.
ಅರ್ಜಿದಾರರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಅಂಕಪಟ್ಟಿ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಹಾಗೂ ಪ್ರಸಕ್ತ ಸಾಲಿನ ಆದಾಯ ಪ್ರಮಾಣ ಪತ್ರ. ತಹಶೀಲ್ದಾರ್/ಮಹಾನಗರ ಪಾಲಿಕೆ/ನಗರ ಪಾಲಿಕೆ/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ ಇವುಗಳಲ್ಲಿ ಅರ್ಜಿದಾರರಿಗೆ ಅನ್ವಯಿಸುವವರಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪತ್ರ. ನಗರ ಸಭೆ/ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ-ಇವುಗಳಿಂದ ಈ ರೀತಿಯ ಸೌಲಭ್ಯ ಪಡೆಯದೇ ಇರುವ ಬಗ್ಗೆ ಅವರಿಂದ ಪಡೆದಿರುವ ಪ್ರಸಕ್ತ ಸಾಲಿನ ದೃಢೀಕರಣ ಪತ್ರ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ/ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಈ ರೀತಿಯ ಸೌಲಭ್ಯ ಪಡೆಯದೇ ಇರುವ ಬಗ್ಗೆ ದೃಢೀಕರಣ ಪತ್ರ. ಬ್ಯಾಡ್ಜ್ ಹೊಂದಿರುವ ಲಘುವಾಹನ ಚಾಲನಾ ಪರವಾನಿಗೆ ಹಾಗೂ ಆರ್.ಟಿ.ಓ. ರವರಿಂದ ಪಡೆದಿರುವ ಡಿ.ಎಲ್. ಎಕ್ಸ್ಟ್ರ್ಯಾಕ್ಟ್ನ ಪ್ರತಿ. ಅರ್ಜಿದಾರರು ಕೇಂದ್ರ/ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ಉದ್ಯೋಗ ಹೊಂದಿರದ ಬಗ್ಗೆ ತಹಶೀಲ್ದಾರ್/ಮಹಾನಗರ ಪಾಲಿಕೆ/ನಗರಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿಯಿಂದ ಪಡೆದಿರುವ ಪ್ರಸಕ್ತ ಸಾಲಿನ ದೃಢೀಕರಣ ಪತ್ರ. ರೂ. 50 ಬೆಲೆಯ ಛಾಪಾ ಕಾಗದದಲ್ಲಿ (ನಮೂನೆ-3)ರಂತೆ ಸ್ವಯಂ ದೃಢೀಕರಿಸಿದ ಅಫಿಡವಿಟ್ ಸಲ್ಲಿಸಬೇಕು. ಅಭ್ಯರ್ಥಿಗಳು ಮೇಲಿನ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಗಳಲ್ಲಿ ಸಲ್ಲಿಸತಕ್ಕದ್ದು.
ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 1 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಮಡಿಕೇರಿ ಇಲ್ಲಿ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ತಿಳಿಸಿದ್ದಾರೆ.