ಸೋಮವಾರಪೇಟೆ, ಜ. 23: ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ರಾಸಾಯನಿಕ ಪ್ರಯೋಗಾಲಯ ಪ್ರಾರಂಭಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಈ ಕುರಿತು ಕೇಂದ್ರ ವಾಣಿಜ್ಯ ಸಚಿವರಾದ ನಿರ್ಮಲ ಸೀತಾರಾಮನ್ ಮತ್ತು ಸಂಸದ ಪ್ರತಾಪ್ ಸಿಂಹ ಅವರಿಗೆ ಪತ್ರ ಬರೆದಿದ್ದು, ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಕ್ಕೆ ಉಪಯೋಗಿಸುವಂತಹ ಕ್ರಿಮಿನಾಶಕಗಳು, ಮೈಲುತ್ತುತ್ತು, ಸುಣ್ಣ ಮುಂತಾದವುಗಳ ಪರೀಕ್ಷೆಗಾಗಿ ಸೌಲಭ್ಯಗಳು ಇಲ್ಲದೇ ಮೈಸೂರಿಗೆ ತೆರಳಬೇಕಾಗಿದೆ. ಹಲವಾರು ಕಂಪನಿಗಳು ಹಲವಾರು ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಮಧ್ಯವರ್ತಿಗಳ ಮುಖಾಂತರ ಮಾರಾಟ ಮಾಡುತ್ತಿದ್ದು, ಇದರ ಗುಣಮಟ್ಟದ ಬಗ್ಗೆ ಬೆಳೆಗಾರರಿಗೆ ತಿಳುವಳಿಕೆ ಇರುವದಿಲ್ಲ. ಈ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಯೋಗಾಲಯ ಪ್ರಾರಂಭಿಸಬೇಕೆಂದು ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ತಿಳಿಸಿದ್ದಾರೆ.

ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಸಹಾಯ ಧನ ಅರ್ಜಿ ವಿಲೇವಾರಿ ಮಾಡಲು ವಿಳಂಬವಾಗುತ್ತಿದೆ. ಸೋಮವಾರಪೇಟೆಯ ಕಾಫಿ ಮಂಡಳಿ ಕಚೇರಿ ಮತ್ತು ಮಡಿಕೇರಿಯಲ್ಲಿರುವ ಉಪ ನಿರ್ದೇಶಕರ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಕಾಫಿ ಮಂಡಳಿಗೆ ಸರಕಾರದಿಂದ ಸಹಾಯಧನ ಶೀಘ್ರವಾಗಿ ಬಿಡುಗಡೆಗೊಳಿಸಿ, ಮಾರ್ಚ್ ಅಂತ್ಯದೊಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.