ಕುಶಾಲನಗರ, ಸೆ. 26: ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಮೇಲೆ ತೀವ್ರ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರದಿಂದ ಸಿದ್ದಾಪುರಕ್ಕೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭ ಗುಡ್ಡೆಹೊಸೂರು ಬಾಳುಗೋಡು ಬಳಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸುಜಾ, ಚೇತನ್ ಎಂಬವರು ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ 9.30 ಕ್ಕೆ ಬಾಳುಗೋಡು ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ಕೆಟ್ಟು ನಿಂತ ಆಟೋ ಸರಿಪಡಿಸುತ್ತಿದ್ದ ಸಂದರ್ಭ ಪ್ರಯಾಣಿಕರ ಮೇಲೆ ನಾಲ್ವರು ಆರೋಪಿಗಳು ವಿನಾಃಕಾರಣ ಅವಾಚ್ಯ ಶಬ್ಧಗಳೊಂದಿಗೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಮಾಹಿತಿ ತಿಳಿದ ಪ್ರಯಾಣಿಕರ ಸಂಬಂಧಿಕರು ಸ್ಥಳಕ್ಕೆ ಬಂದು ವಿಚಾರಿಸಿದ ಸಂದರ್ಭ ಅವರ ಮೇಲೆ ಕೂಡ ಆರೋಪಿಗಳು ಹಲ್ಲೆ ನಡೆಸಿರುವದಾಗಿ ಪೊಲೀಸರು ತಿಳಿಸಿದ್ದು, ಈ ಸಂದರ್ಭ ಜೇಮ್ಸ್ ಮತ್ತು ಅಗಸ್ಟಿನ್ ಎಂಬವರಿಗೆ ಗಾಯಗಳುಂಟಾಗಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕುಶಾಲನಗರ ಠಾಣಾಧಿಕಾರಿ ಜೆ.ಇ. ಮಹೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿ ಗಳಿಗೆ ಸೇರಿದ 1 ಬೈಕ್ 1 ಮಾರತಿ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ.