ವೀರಾಜಪೇಟೆ, ಅ. 16: ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರತ್ನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವದು ಹೇಗೆ? ಎಂಬ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ಶಿಕ್ಷಕರಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕ ಎಂ.ಆರ್. ಅಕ್ರಂ, ಇಂದು ವಿಶ್ವ ತಂತ್ರಜ್ಞಾನ ಯುಗದಲ್ಲಿ ಮುಂದೆ ಸಾಗುತ್ತಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದೆ. ಹಾಗಾಗಿ ಪ್ರಾಥಮಿಕ ಹಂತದಿಂದಲೇ ತಮ್ಮ ಗುರಿ ಮತ್ತು ಉದ್ದೇಶವನ್ನು ಸ್ಪಷ್ಟವಾಗಿರಿಸಿಕೊಂಡು ಉದ್ಯೋಗ ಜಗತ್ತಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಉದ್ಯೋಗ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಇಲ್ಲಿ ಪ್ರತಿಭಾವಂತರಿಗೆ ಹೆಚ್ಚು ಅವಕಾಶ ಲಭಿಸುತ್ತಿದ್ದು, ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗವಕಾಶಗಳಿಗೆ ಕಾದು ಕುಳಿತುಕೊಳ್ಳದೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಚಂಡ ಅರುಣ್ ಅಪ್ಪಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಂಬುಡುಮಾಡ ಜಸ್ಮೀ ಲವ, ಬಲ್ಲಡಿಚಂಡ ಸುಮಿ ಸೀತಮ್ಮ, ಪಿ.ಎಸ್. ನಾಗೇಶ್, ಮೇಚಿಯಂಡ ರೀಟಾ ಭೀಮಪ್ಪ ಮತ್ತು ಪ್ರಾಂಶುಪಾಲರು ನಾಣಯ್ಯ, ಎನ್.ಎಸ್.ಎಸ್. ಅಧಿಕಾರಿ ಎಂ.ಬಿ. ದೇಚಮ್ಮ ಹಾಜರಿದ್ದರು.