ಮಡಿಕೇರಿ, ಆ.2 : ಸ್ವಚ್ಛ ಭಾರತ್ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ತಮ್ಮ ಸಚಿವ ಸಂಪುಟವನ್ನು ಸ್ವಚ್ಛಗೊಳಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶ ಪ್ರವಾಸದಲ್ಲಿ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರ 78 ಮಂದಿಯ ಸಚಿವ ಸಂಪುಟದಲ್ಲಿ ಶೇ.31 ರಷ್ಟು ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ದರು. ಅನೇಕರು ಕೊಲೆ ಯತ್ನ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತೀಯ ಗಲಭೆ ಸೃಷ್ಟಿ ಮೊದಲಾದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆ ಗೊಂಡ 19 ಮಂದಿ ಸಚಿವರಲ್ಲಿ 7 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ. ಅನುಪ್ರಿಯ ಸಿಂಗ್ ಪಟೇಲ್, ರಮೇಶ್ ಜಿಗಜಿಣಗಿ, ಪಾಗನ್ ಸಿಂಗ್ ಕಾಲಸ್ತೆ ವಿಜಯ್ ಗೋಯಲ್, ರಾಜೇನ್ ಗೋಹಿನ್, ರಾಮ್ದಾಸ್ ಅಟ್ವಳ್, ಎಂ.ಜೆ. ಅಕ್ಬರ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಸಂಘ ಪರಿವಾರದ ನಾಯಕಿ ಉಮಾಭಾರತಿ 13 ಮೊಕದ್ದಮೆಗಳನ್ನು ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿರುದ್ಧ 4 ಮೊಕದ್ದಮೆಗಳಿವೆ ಎಂದು ಟಿ.ಪಿ.ರಮೇಶ್ ಆರೋಪಿಸಿದರು. ಕಳಂಕಿತರೆಲ್ಲರನ್ನು ಮಂತ್ರಿ ಮಂಡಲ ದಿಂದ ಮುಕ್ತ ಗೊಳಿಸಿ ಆರೋಪ ರಹಿತರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿ ಸ್ವಚ್ಛ ಭಾರತದ ಆಡಳಿತವನ್ನು ಪ್ರಧಾನಿಗಳು ನೀಡಲಿ ಎಂದು ಅವರು ಒತ್ತಾಯಿಸಿದರು. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಬಗ್ಗೆ ಬಿಜೆಪಿ ನೀಡುತ್ತಿರುವ ಹೇಳಿಕೆಯನ್ನು ದೇಶದ ಜನತೆ ಮಾನ್ಯ ಮಾಡುವದಿಲ್ಲವೆಂದು ಅಭಿಪ್ರಾಯ ಪಟ್ಟ ರಮೇಶ್ ವಿಶ್ವದ ಏಕೈಕ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಎಲ್ಲಾ ಕ್ಲಿಷ್ಟಕರ ಸಂದರ್ಭದಲ್ಲು ಯಾವದೇ ಒತ್ತಡಕ್ಕೆ ಮಣಿಯದೆ ದಿಟ್ಟ ನಿರ್ಧಾರ ಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆಯೆಂದು ತಿಳಿಸಿದರು.