ಸೋಮವಾರಪೇಟೆ,ಆ.4: ಇಲ್ಲಿನ ವೀರ ಕನ್ನಡಿಗರ ಸೇನೆಯ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿರ್ಮಾಣ ಮಾಡುವದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘ ಪಟ್ಟಣ ಪಂಚಾಯಿತಿಗೆ ದೂರು ನೀಡಿದೆ.

ಸೋಮವಾರಪೇಟೆ ಪಟ್ಟಣದಲ್ಲಿ ವೀರ ಕನ್ನಡಿಗರ ಸೇನೆಯ ಹೆಸರಿನಲ್ಲಿ ಕಾರ್ಯಪ್ಪ ಅವರ ಪ್ರತಿಮೆ ಸ್ಥಾಪಿಸಲು ಇಲ್ಲಿನ ಪಟ್ಟಣ ಪಂಚಾಯಿತಿ ಅನುಮತಿ ನೀಡಿದೆ, ಜತೆಗೆ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಮೆ ನಿರ್ಮಿಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ದಿವಾಕರ್ ಅವರು ಹೇಳಿಕೆ ನೀಡಿದ್ದು, ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ ಇದುವರೆಗೂ ಯಾವದೇ ಅನುಮತಿ ಪಡೆದಿಲ್ಲ ಎಂದು ಮಾಜೀ ಸೈನಿಕರು ಆರೋಪಿಸಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ಮಾಜೀ ಸೈನಿಕರ ಸಂಘ ತೀರ್ಮಾನಿಸಿದೆ. ಇದಕ್ಕೂ ಮೊದಲೇ ವೀರ ಕನ್ನಡಿಗರ ಸೇನೆ ಎಂಬ ಸಂಘಟನೆ ಹಣ ವಸೂಲಿಯಲ್ಲಿ ತೊಡಗಿದೆ. ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದ ಪಟ್ಟಣ ಪಂಚಾಯಿತಿಯಾಗಲೀ ಅಥವಾ ಜಿಲ್ಲಾಧಿಕಾರಿಗಳಾಗಲೀ ಅನುಮತಿ ನೀಡಿಲ್ಲ. ಸ್ಥಳವನ್ನೂ ಮಂಜೂರು ಮಾಡಿಲ್ಲ. ಆದರೂ ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಾಜೀ ಸೈನಿಕರ ಸಂಘದ ಪದಾಧಿಕಾರಿಗಳು ಪ.ಪಂ. ಆಡಳಿತ ಮಂಡಳಿಗೆ ಮನವಿ ಮಾಡಿದೆ.