ಮಡಿಕೇರಿ, ಜ. 18: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾ. 20 ರಂದು ಮಾಜಿ ಸೈನಿಕರ ಸಂಘ ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕೊಡಗು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎ. ಅಪ್ಪಯ್ಯ ನಿವೃತ್ತ ಯೋಧರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವದನ್ನು ತೀವ್ರವಾಗಿ ಖಂಡಿಸಿದರು. ಮಾಜಿ ಯೋಧರನ್ನು ಜಿಲ್ಲಾಡಳಿತ ನಡೆಸಿಕೊಳ್ಳುವ ರೀತಿ ಸರಿಯಿಲ್ಲ. ಜಿಲ್ಲಾಡಳಿತಕ್ಕೆ ಸೈನಿಕರ ಕರ್ತವ್ಯ ಮತ್ತು ಅವರ ಬದುಕಿನ ಸ್ಥಿತಿಗತಿಯ ಬಗ್ಗೆ ಅರಿವಿನ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶ ಸೇವೆ ಮಾಡಿದ ಸೇನಾಧಿಕಾರಿಗಳು ಹಾಗೂ ಯೋಧರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದ್ದು, ತಾ. 20 ರಂದು ನಡೆಯುವ ಪ್ರತಿಭಟನೆಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುವದಾಗಿ ಅಪ್ಪಯ್ಯ ತಿಳಿಸಿದರು. ಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಎಂ. ಅಚ್ಚುತ ನಾಯರ್, ಹಿರಿಯ ಸಲಹೆಗಾರ ಬಿ.ಎ. ಪೂಣಚ್ಚ, ಆಡಳಿತ ಮಂಡಳಿ ಸದಸ್ಯರಾದ ಎಂ.ಕೆ. ಮಾದಯ್ಯ, ಬಿ.ಯು. ಮುದ್ದಯ್ಯ ಹಾಗೂ ಎ.ಸಿ. ಗಣಪತಿ ಉಪಸ್ಥಿತರಿದ್ದರು.