ಮಡಿಕೇರಿ, ಜ. 17: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬರದ ಛಾಯೆ ಗೋಚರಿಸಿದ್ದು, ಜನ - ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರತಿ ಜಿ.ಪಂ. ಕ್ಷೇತ್ರಗಳಿಗೆ ತಲಾ 25 ರಂತೆ ತೆರೆದ ಬಾವಿ ನಿರ್ಮಿಸಲು ಅನುದಾನ ಒದಗಿಸ ಲಾಗುವದೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಘೋಷಣೆ ಮಾಡಿದರು. ನೀರಿನ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸು ವಂತೆ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.ಅಧ್ಯಕ್ಷ ಹರೀಶ್ ಅವರ ಅಧ್ಯಕ್ಷತೆ ಯಲ್ಲಿ ಇಲ್ಲಿನ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮುರಳಿ ಕರುಂಬಯ್ಯ ಅವರು ಜಿಲ್ಲೆಯಲ್ಲಿ ಬರಗಾಲವಿದ್ದು, ಕುಡಿಯುವ ನೀರು ಪೂರೈಕೆ ಮಾಡಲು ಕೈಗೊಂಡಿರುವ ಕ್ರಮ ಹಾಗೂ ಅನುದಾನದ ಬಗ್ಗೆ ಮಾಹಿತಿ ಬಯಸಿದರು.