ಮಡಿಕೇರಿ, ಡಿ. 4: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾತಂತ್ರವನ್ನು ಬಲಪಡಿಸುವ ಸಲುವಾಗಿ ಭಾರತೀಯ ಪ್ರಜೆಗಳು ದೇಶದ ಆಂತರಿಕ ಭದ್ರತೆ ಮತ್ತು ಆರ್ಥಿಕತೆಗೆ ಸವಾಲಾಗಿರುವ ಕಾಂಗ್ರೆಸ್, ಪಿಎಫ್‍ಐ, ಎಸ್‍ಡಿಪಿಐ ಹಾಗೂ ಸಿಪಿಐಎಂ ನಂತಹ ರಾಜಕೀಯ ಪಕ್ಷಗಳನ್ನು, ಸಂಘಟನೆಗಳನ್ನು ಬೆಳೆಸಿದರೆ ದೇಶಕ್ಕೆ ಮುಂದಿನ ದಿನಗಳಲ್ಲಿ ಭಾರೀ ಗಂಡಾಂತರ ಕಾದಿದೆ ಎಂದು ಬಿಜೆಪಿ ಮುಖಂಡ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ವಿಶ್ವದ ಸಂಪದ್ಭರಿತ ರಾಷ್ಟ್ರ ಭಾರತವನ್ನು ಸ್ವಾತಂತ್ರ್ಯಾ ನಂತರ ನಿರಂತರವಾಗಿ 60 ವರ್ಷಗಳ ಕಾಲ ಆಡಳಿತ ನಡೆಸಿ ಯಾವದೇ ಅಭಿವೃದ್ಧಿಯನ್ನು ಮಾಡಲಾಗದ ಕಾಂಗ್ರೆಸ್ ಪಕ್ಷಕ್ಕೂ, ಸ್ವಾತಂತ್ರ್ಯ ಪೂರ್ವ ಭಾರತವನ್ನಾಳಿದ ಬ್ರಿಟಿಷರ ಆಡಳಿತಕ್ಕೂ ವ್ಯತ್ಯಾಸಗಳಿಲ್ಲವೆಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಆಳಿದ ವಿದೇಶಿಯರು ಭಾರತದ ಸಂಪತ್ತನ್ನು ಲೂಟಿಗೈದು ತಮ್ಮ ತಮ್ಮ ದೇಶಗಳಿಗೆ ದೋಚಿಕೊಂಡು ಹೋದರೆ, ನಂತರದ 60 ವರ್ಷಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಿಲಿಯಗಟ್ಟಲೆ ಹಣ ವಿದೇಶಕ್ಕೆ ರವಾನೆಯಾಗಿದೆ. ಇಂದು ಸ್ವಿಸ್ ಬ್ಯಾಂಕ್‍ನಲ್ಲಿ ಜಮೆಯಾಗಿರುವ ಕೋಟಿ-ಕೋಟಿಗಟ್ಟಲೆ ಹಣದ ರಾಶಿ ಯಾರ ಕೊಡುಗೆ? ಎಂಬದನ್ನು ಕಾಂಗ್ರೆಸ್ ನಾಯಕರೇ ದೇಶದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ರವಿ ಕುಶಾಲಪ್ಪ ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯಾ ನಂತರದ ಆರಂಭದಿಂದಲೇ ಭ್ರಷ್ಟಾಚಾರವನ್ನು ಕಾಂಗ್ರೆಸ್ ಬೆಳೆಸಿದೆ ಎಂದ ಅವರು ಸ್ವಾತಂತ್ರ್ಯಾ ನಂತರ 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಸಿಗರು ಸರಿಯಾದ ರೀತಿಯಲ್ಲಿ ಆಡಳಿತ ನಡೆಸಿದಿದ್ದರೆ ಭಾರತ ಇಂದು ಅಭಿವೃದ್ಧಿಯಲ್ಲಿ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿರುತಿತ್ತು ಎಂದಿದ್ದಾರೆ.
ದೇಶದಲ್ಲಿ ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ದೇಶದಲ್ಲಿನ ಕಾಳಧನಿಕರು, ತೆರಿಗೆ ವಂಚಕರು, ಭಯೋತ್ಪಾದಕರಿಗೆ ಆಘಾತ ನೀಡಿದ ದೇಶದ ಪ್ರಧಾನಿ ಅವರ ಬಗ್ಗೆ ಇಡೀ ವಿಶ್ವವೇ ಶ್ಲಾಘನೆ ವ್ಯಕ್ತಪಡಿಸುತ್ತಿದೆ. ಆದರೆ ಕಾಂಗ್ರೆಸ್ ಮತ್ತಿತರ ಮಿತ್ರ ಪಕ್ಷಗಳು ಎಟಿಎಂಗಳ ಮುಂದೆ ಜನರನ್ನು ಹಣಕೊಟ್ಟು ತಂದು ನಿಲ್ಲಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಆತುರದಲ್ಲಿ ಮುಖಭಂಗ ಅನುಭವಿಸಿ ನಗೆಪಾಟಲಿಗೀಡಾಗುತ್ತಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ಆಪ್ತರ ಮನೆಗಳ ಮೇಲೆ ಧಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕೋಟ್ಯಂತರ ಮೌಲ್ಯದ 2000 ರೂ. ಗಳ ನೋಟುಗಳನ್ನು ವಶಪಡಿಸಿಕೊಂಡಿರುವದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನ ಮತ್ತು ಚೀನಾ ದೇಶಗಳು ಕ್ರಮವಾಗಿ ಜಿಹಾದಿ ಮತ್ತು ಮಾವೋವಾದಿ ಉಗ್ರರನ್ನು ಭಾರತದೊಳಗೆ ಸೃಷ್ಟಿಸಿ ಭಾರತದ ವಿರುದ್ಧವೇ ಆಂತರಿಕ ಯುದ್ಧ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿವೆ. ಈ ಕಾರ್ಯಕ್ಕಾಗಿ ಕೋಟ್ಯಂತರ ಅಕ್ರಮ ಕಪ್ಪುಹಣ ದೇಶದೊಳಕ್ಕೆ ವ್ಯವಸ್ಥಿತವಾಗಿ ಸರಬರಾಜಾಗುತ್ತಿದೆ.
ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ವ್ಯವಸ್ಥಿತ ಸಂಚು ಉಗ್ರರಿಂದ ನಡೆಯುತ್ತಿದೆ. ಈ ಉಗ್ರರನ್ನು ಮಟ್ಟ ಹಾಕಿದಾಗಲೇ ದೇಶದೊಳಗೆ ಶಾಂತಿ-ಸಹಬಾಳ್ವೆ-ಸಾಮರಸ್ಯ ನೆಲೆಸಲು ಸಾಧ್ಯವೆಂದು ರವಿ ಕುಶಾಲಪ್ಪ ಹೇಳಿದ್ದಾರೆ.