ಸುಂಟಿಕೊಪ್ಪ, ಸೆ. 16: ಸುಂಟಿಕೊಪ್ಪ 140ನೇ ಸಹಕಾರಿ ಮಹಿಳಾ ಸಂಘ ತನ್ನ ಸ್ವಂತ ಕಟ್ಟಡ ಹೊಂದಿದ್ದು ಜ್ಞಾನ ವಿಹಾರ ನರ್ಸರಿ ಶಾಲೆಯನ್ನು ತೆರೆಯಲು ಸನ್ನದ್ಧವಾಗಿದೆ. ಸ್ವಸಹಾಯ ಸಂಘದವರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸುವ ಉದ್ದೇಶವಿದೆ ಎಂದು ಸಂಘದ ಅಧ್ಯಕ್ಷೆ ಲೀಲಾ ಮೇದಪ್ಪ ಹೇಳಿದರು.

ಇಲ್ಲಿನ ಜ್ಞಾನಧಾರ ಶಿಶು ಕೇಂದ್ರದಲ್ಲಿ ಆಯೋಜಿಸಲಾದ ಸುಂಟಿಕೊಪ್ಪ 140ನೇ ಮಹಿಳಾ ಸಹಕಾರಿ ಸಂಘದ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಲುಗುಲಿ ರಸ್ತೆಯಲ್ಲಿ ಕಳೆದ 4 ವರ್ಷದಿಂದ ನಿರ್ಮಾಣ ಹಂತದಲ್ಲಿದ್ದ ಸಂಘದ ಕಟ್ಟಡ ಉದ್ಘಾಟನೆಯಾಗಿದೆ.

ಈ ಕಟ್ಟಡಕ್ಕೆ 14 ಲಕ್ಷದ 70 ಸಾವಿರ ರೂ ವೆಚ್ಚಮಾಡಿ ಈ ಭವ್ಯ ಕಟ್ಟಡದಲ್ಲಿ ಜ್ಞಾನ ವಿಹಾರ ನರ್ಸರಿ ಶಾಲೆ ಆರಂಭಿಸಲಾಗುವದು. ಅದಕ್ಕಾಗಿ ಬೇಕಾದ ಬೆಂಚು ಆಟದ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ. ದಾನಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬರಬೇಕೆಂದು ಕರೆ ನೀಡಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯವರು ಸಂಘಕ್ಕೆ ರೂ. 25,000 ನೆರವು ನೀಡಲು ಸಮ್ಮತಿಸಿದ್ದಾರೆಂದು ಹೇಳಿದರು. ಸಂಘದಿಂದ ನಡೆಸಲಾಗುತ್ತಿರುವ ನ್ಯಾಯಬೆಲೆ ಅಂಗಡಿಯಿಂದ ಸಾಮಗ್ರಿ ಸಾಗಾಣಿಕೆ ವೆಚ್ಚ, ಕೂಲಿ, ಕಾರ್ಯದರ್ಶಿಯ ಸಂಬಳ ಸೇರಿದಂತೆ ಆದಾಯ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.

ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದ ಮೇಲ್ಭಾಗದಲ್ಲಿ ವಿವಿಧ ಸಂಘ-ಸಂಸ್ಥೆ ಹಾಗೂ ಸ್ತ್ರೀಶಕ್ತಿ ಸಂಘಗಳ ಕಾರ್ಯಕ್ರಮಕ್ಕೆ ಸಹಕಾರಿಯಾಗುವಂತೆ ಸಮುದಾಯ ಭವನ ಕಟ್ಟಡಕ್ಕೆ ಕೆಲವು ಅಭಿವೃದ್ಧಿ ಕಾಮಗಾರಿಗಳು ಉಳಿದುಕೊಂಡಿದ್ದು, ಅವುಗಳನ್ನು ಪೂರ್ಣಗೊಳಿಸಲು ಸಂಘದ ಸದಸ್ಯರು ದಾನಿಗಳ ಮೊರೆ ಹೋಗಲು ಯೋಜನೆಯನ್ನು ರೂಪಿಸಲಾಗಿದ್ದು ಅನುದಾನ ಕ್ರೋಢೀಕರಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಲೀಲಾ ಮೇದಪ್ಪ ಹೇಳಿದರು.

ಮಂಗಳ ಕಾಮತ್ ಪ್ರಾರ್ಥಿಸಿ, ಲೀಲಾ ಮೇದಪ್ಪ ಸ್ವಾಗತಿಸಿ, ಕಾರ್ಯದರ್ಶಿ ಭವಾನಿ ಕಳೆದ ಸಾಲಿನ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.