ಸಿದ್ದಾಪುರ, ಸೆ. 22: ಪ್ರಗತಿಯ ಪಥದತ್ತ ಗುಹ್ಯ ಶ್ರೀ ಅಗಸ್ತ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು.
ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ ನಡೆದ ಸಂಘದ 2015-16 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಸಂಘವು 53.98 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಹೀಗಾಗಿ ಸಂಘದ ಸದಸ್ಯರಿಗೆ ಶೇ 25 ಡಿವಿಡೆಂಡ್ ನೀಡಲು ಮಹಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಘದಲ್ಲಿ ಪಾಲು ಬಂಡವಾಳ ರೂ 1.01 ಕೋಟಿಗಳಾಗಿದ್ದು, ಠೇವಣಿಗಳು ರೂ 21.29 ಕೋಟಿ ಹಾಗೂ ಸದಸ್ಯರುಗಳಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಸೇರಿ ಒಟ್ಟು ರೂ 18.59 ಕೋಟಿ ಸಾಲ ನೀಡಲಾಗಿದೆ. ಸಂಘವು ಪ್ರತಿ ವರ್ಷದಂತೆ ಈ ಭಾರಿಯೂ ಶೇ 100 ರಷ್ಟು ಫಸಲು ಸಾಲ ವಸೂಲಾತಿ ಮಾಡಲಾಗಿದ್ದು, ಡೀಸೆಲ್ ಹಾಗೂ ಪೆಟ್ರೋಲ್ ವ್ಯಾಪಾರದಲ್ಲಿ ರೂ 14.34 ಕೋಟಿ ವ್ಯವಹಾರ ನಡೆದಿದೆ ಎಂದರು.
ಸಂಘದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ರೂ 2000 ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಸಂಘದ ಉತ್ತಮ ವ್ಯವಹಾರ ಗುರುತಿಸಿ ವಿವಿಧ ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ಸಭೆಯಲ್ಲಿ ಉತ್ತಮ ವ್ಯವಹಾರ ನಡೆಸಿದ ಸಂಘ ಸದಸ್ಯ ಕರಡಿಗೋಡು ಗ್ರಾಮದ ಮಿತ್ತೂರು ರಾಘವಯ್ಯ, ಸಿದ್ದಾಪುರದ ಕೆ.ಕೆ.ಶ್ರೀನಿವಾಸ್, ಗುಹ್ಯ ಗ್ರಾಮದ ಮೂಕಂಡ ನಾಣಯ್ಯ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾತ್ರವಲ್ಲದೆ ಉತ್ತಮ ವ್ಯವಹಾರ ನಡೆಸಿದ 3 ಸ್ವಸಹಾಯ ಸಂಘಗಳಿಗೆ ಹಾಗೂ ಸಂಘದ ಸದಸ್ಯರಾಗಿರುವ ಕೆ.ಆರ್. ದೇವಜಾನು ಅವರನ್ನು ಉತ್ತಮ ಪ್ರತಿನಿಧಿಯಾಗಿ ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿಜೋಯ್, ನಿರ್ದೇಶಕರಾದ ಕೆ.ಕೆ.ಚಂದ್ರಕುಮಾರ್, ಕೆ.ಜಿ.ಈರಪ್ಪ, ಪಿ.ಕೆ.ಚಂದ್ರನ್, ಕೆ.ಸುನಿಲ್, ಎ.ಕೆ. ಪಾರ್ವತಿ, ಎಂ.ಪಿ. ಪ್ರಮಿಳ, ಮೂಸ, ಹೆಚ್.ಕೆ. ಚೆಲುವಯ್ಯ, ಎಸ್.ಬಿ. ಪ್ರತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಪ್ರಸನ್ನ ಇದ್ದರು. ಕೆ.ಜಿ.ಈರಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.