ಸೋಮವಾರಪೇಟೆ, ಸೆ. 24: ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿ ಪಥದಲ್ಲಿ ಮುಂದುವರೆಯುತ್ತಿದೆ ಎಂದು ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್.ದಿನೇಶ್ ಹೇಳಿದರು.

ಸಹಕಾರ ಸಂಘದ ವಾರ್ಷಿಕ ಮಹಾಸಭೆ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಸಾಲದ ಸೌಲಭ್ಯಗಳು, ಸದಸ್ಯ ಮತ್ತು ಸದಸ್ಯೇತರರಿಗೆ ಬ್ಯಾಂಕಿಂಗ್ ಸೌಲಭ್ಯ, ದಿನ ಬಳಕೆಯ ಆಹಾರ ಪದಾರ್ಥಗಳು ಹಾಗೂ ಇದರೊಂದಿಗೆ ರೈತರ ಉಪಯೋಗಕ್ಕೆ ಬೇಕಾಗುವ ರಸಗೊಬ್ಬರ, ಕ್ರಿಮಿನಾಶಕ ಇದರ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಸದಸ್ಯರು ಯಶಸ್ವಿನಿ ವಿಮಾ ಯೋಜನೆಗೆ ಸದಸ್ಯರಾಗಬೇಕು. ಆಗಸ್ಟ್ 31ರ ವರಗೆ ಸದಸ್ಯರಾಗಲು ಅವಕಾಶವಿದೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಾವತಿ, ನಿರ್ದೇಶಕರುಗಳಾದ ಧರ್ಮಪ್ಪ, ಗೋಪಾಲ್, ಅನಿಲ್ ಕುಮಾರ್, ದೇಶ್‍ರಾಜ್, ಬಸವರಾಜ್, ರಾಜೇಶ್, ಜಯೇಂದ್ರ, ಕೆ.ಪಿ. ಗೌರಮ್ಮ ಮತ್ತು ಸಹಕಾರ ಸಂಘಗಳ ಮೇಲ್ವಿಚಾರಕರಾದ ಚಂದ್ರಶೇಖರ್ ಉಪಸ್ಥಿತರಿದ್ದರು. ಇದೇ ಸಂದರ್ಭ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.